×
Ad

‘ವಿದ್ಯಾರ್ಥಿಗಳು ತಂಬಾಕು ಸೇವನೆಯ ದುಷ್ಪರಿಣಾಮ ಅರಿಯಲಿ’

Update: 2019-05-31 20:49 IST

ಉಡುಪಿ, ಮೇ 31: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ ಮತ್ತು ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಶುಕ್ರವಾರ ಬಜಗೋಳಿಯಲ್ಲಿ ತಂಬಾಕು ರಹಿತ ದಿನದ ಅಂಗವಾಗಿ ‘ಗುಲಾಬಿ ಆಂದೋಲನ’ ಜಾಥಾ ಕಾರ್ಯಕ್ರಮ ನಡೆಯಿತು.

ಜಾಥಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟು ಮಾಲಕರಿಗೆ ಒಂದು ಗುಲಾಬಿ ಹೂ ನೀಡುವುದರ ಮೂಲಕ ‘ತಂಬಾಕು ತ್ಯಜಿಸಿ, ಜೀವನವನ್ನು ಆಯ್ದಕೊಳ್ಳಿ’ ಮತ್ತು ‘ತಂಬಾಕು ಮುಕ್ತ ನಾಡನ್ನು ನಿರ್ಮಿಸೋಣ’ ಎಂಬ ಸಂದೇಶವ್ನು ತಲುಪಿಸಲು ಪ್ರಯತ್ನಿಸಲಾಯಿತು.

ಜಾಥಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟು ಮಾಲಕರಿಗೆ ಒಂದು ಗುಲಾಬಿ ಹೂ ನೀಡುವುದರ ಮೂಲಕ ‘ತಂಬಾಕು ತ್ಯಜಿಸಿ, ಜೀವನವನ್ನು ಆಯ್ದಕೊಳ್ಳಿ’ ಮತ್ತು ‘ತಂಬಾಕು ಮುಕ್ತ ನಾಡನ್ನು ನಿರ್ಮಿಸೋಣ’ ಎಂಬ ಸಂದೇಶವನ್ನು ತಲುಪಿಸಲು ಪ್ರಯತ್ನಿಸಲಾಯಿತು. ಗುಲಾಬಿ ಆಂದೋಲನದ ಜಾಥಾ ಬಜಗೋಳಿಯ ಸಿಟಿ ಬಸ್‌ನಿಲ್ದಾಣದಿಂದ ಭುವನೇಶ್ವರಿ ಸರ್ಕಲ್ ಮೂಲಕ ಸಾಗಿ ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನವರೆಗೆ ನಡೆಯಿತು. ಜಾಥಾಕ್ಕೆ ಗುಲಾಬಿ ಹೂ ನೀಡುವ ಮೂಲಕ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಹಸಿರು ನಿಶಾನೆ ನೀಡಿದರು.

ನಂತರ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ಉದಯ ಎಸ್. ಕೋಟ್ಯಾನ್ ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿ ತಂಬಾಕು ವ್ಯಸನಿಗಳ ಸಂಖ್ಯೆ ಹೆಚ್ಚಿದ್ದು, ಇದರಿಂದ ಹೃದಯಾಘಾತ, ಅಸ್ತಮಾದಂಥ ಕಾಯಿಲೆಗಳು ಹೆಚ್ಚಾಗತೊಡಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಅರಿತು ಇಂತಹ ದುಶ್ಟಟಗಳಿಗೆ ಬಲಿಯಾಗದಂತೆ ಜಾಗೃತಿ ವಹಿಸಬೇಕು ಎಂದರು.

ಅಧ್ಯಕ್ಷತೆಯನ್ನು ಮೂಡಾರು ಜಿಪಂ ಅಧ್ಯಕ್ಷೆ ಗೀತಾ ಪಾಟ್ಕರ್ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ/ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಘಟಕದ ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು, ಕಾಲೇಜಿನ ಪ್ರಾಂಶುಪಾಲ ಗಣೇಶ್ ಬರ್ಲಾಯ, ಶಿಕ್ಷಕ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಕ್ಷೇತ್ರ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ಶಶಿಧರ್ ನಿರೂಪಿಸಿದರು. ಕಾರ್ಕಳ ಹಿರಿಯ ಆರೋಗ್ಯ ಸಹಾಯಕ ಶಿವರಾಮ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News