×
Ad

ಯುವಕರಿಬ್ಬರ ನಡುವೆ ಹಲ್ಲೆ, ಕೊಲೆಯತ್ನ ಆರೋಪ: ದೂರು-ಪ್ರತಿದೂರು

Update: 2019-05-31 21:15 IST

ಬಂಟ್ವಾಳ, ಮೇ 31: ಬಂಟ್ವಾಳ ಕಸ್ಬಾ ಗ್ರಾಮದ ಲೊರೆಟ್ಟೋ ಎಂಬಲ್ಲಿ ಗುರುವಾರ ರಾತ್ರಿ ನಡೆದ ಘಟನೆಯ ಬಗ್ಗೆ ಯುವಕರಿಬ್ಬರು ಕೊಲೆಯತ್ನ ಹಾಗೂ ಹಲ್ಲೆ ನಡೆಸಿದ ಆರೋಪದಡಿ ದೂರು, ಪ್ರತಿದೂರನ್ನು ನೀಡಿದ್ದು, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ದೂರು:

ಲೊರೆಟ್ಟೋ ಪೆದುಮಲೆಯಿಂದ ಮನೆಗೆ ಹೋರಟು ಬರುವಾಗ ರಾತ್ರಿ ಸುಮಾರು 10ರ ವೇಳೆ ಲೋರೆಟ್ಟೊ ವಾಸು ಪೂಜಾರಿ ಯವರ ಅಂಗಡಿಯ ಮುಂದೆ ಸಹೋದರನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಚೇತನ ಪೂಜಾರಿ ಮತ್ತು ರಾಕೇಶ್ ಗದರಿಸಿದ್ದಾರೆ. ಬಳಿಕ ಅಲ್ಲಿಂದ ಕಮಲಕಟ್ಟೆ ಎಂಬಲ್ಲಿಗೆ ತಲುಪಿದಾಗ ಅಲ್ಲಿಗೆ ಬಂದ ಆರೋಪಿಗಳಿಬ್ಬರೂ ರಾಡ್‍ನಿಂದ ಹಲ್ಲೆ ನಡೆಸಿದ್ದು, ಅವರಿಂದ ತಪ್ಪಿಸಿಕೊಂಡು ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿ ಹಲ್ಲೆಗೊಳಗಾದ ಬೊಳ್ಳಾಯಿ ನಿವಾಸಿ ನಿತಿನ್ ಕುಮಾರ್ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿದೂರು: 

ಲೋರೆಟ್ಟೊ ಅಂಗಡಿಯ ಮುಂದೆ ಸ್ನೇಹಿತ ರಾಕೇಶ ಎಂಬಾತನ ಜೊತೆ ಮಾತನಾಡಿಕೊಂಡು ಕುಳಿತುಕೊಂಡಿದ್ದಾಗ, ಬೈಕ್‍ನಲ್ಲಿ ಬಂದ ನಿತಿನ್ ಎಂಬಾತನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ. ಗಾಯಗೊಂಡ ತಾನು ಚಿಕಿತ್ಸೆಗಾಗಿ ತುಂಬೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಚೇತನ್ ಪೂಜಾರಿ ಎಂಬವರು ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆಸ್ಪತ್ರೆಗೆ ಶಾಸಕ ಭೇಟಿ:

ಹಲ್ಲೆಗೊಳಗಾಗಿ ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಿತಿನ್ ಪೂಜಾರಿ ಅವರನ್ನು ಶುಕ್ರವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷೆಯಾಗಿ ಯುವಕನಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ರಮಾನಾಥ ರಾಯಿ, ಉಮೇಶ್ ಅರಳ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News