ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದಿರುವುದು ದೇಶಕ್ಕೆ ಮಾಡಿದ ದೊಡ್ಡ ಅವಮಾನ: ಪೇಜಾವರಶ್ರೀ

Update: 2019-05-31 16:27 GMT

ಉಡುಪಿ, ಮೇ 31: ಮಹಾತ್ಮ ಗಾಂಧಿಯವರನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ರಾಷ್ಟ್ರ ಭಕ್ತ ಎಂದಿರುವುದು ದೇಶಕ್ಕೆ ಮಾಡಿದ ದೊಡ್ಡ ಅವಮಾನ. ಇಂಥ ಹೇಳಿಕೆ ನೀಡಿದವರ ಬಗ್ಗೆ ನನಗೆ ಅಸಮಧಾನವಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ನಡೆದ ಶ್ರೀಕೃಷ್ಣ ಸುವರ್ಣ ಗೋಪುರಮ್ ಸಮರ್ಪಣೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಮಹಾತ್ಮಗಾಂಧಿ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ ಭಾರತ ಗಾಂಧೀಜಿಯವರಿಂದ ಪ್ರಾರಂಭವಾಗಿದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಅವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ ಎಲ್ಲವೂ ಜಾಗೃತವಾಗಿದೆ. ಹೀಗಾಗಿ ವೇದವ್ಯಾಸವೇ ರಾಷ್ಟ್ರಪಿತರು ಎಂಬುದು ನನ್ನ ಅಭಿಪ್ರಾಯ ಎಂದರು. ಹೀಗಾಗಿ ಮಹಾತ್ಮಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರು. ವೇದವ್ಯಾಸರು ನಮ್ಮ ರಾಷ್ಟ್ರಪಿತರು ಎಂದು ಪೇಜಾವರಶ್ರೀಗಳು ಪುನರುಚ್ಚರಿಸಿದರು.

ರಾಮಮಂದಿರ ನಿರ್ಮಾಣ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲೇ ಬೇಕು. ಬಿಜೆಪಿಗೆ  ದೊಡ್ಡ ಬಹುಮತ ಬಂದಿದೆ. ಹೀಗಾಗಿ ಸಂಸತ್‌ನಲ್ಲಿ ಏನು ಬೇಕಾದರೂ ನಿರ್ಣಯ ಮಾಡಬಹುದು. ದೇಶದ ಸಂಸತ್ ಸುಪ್ರೀಂ ಕೋರ್ಟಿಗಿಂತ ದೊಡ್ಡದು ಎಂದವರು ಅಭಿಪ್ರಾಯ ಪಟ್ಟರು.

ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರೂ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಪೇಜಾವರಶ್ರೀಗಳು ಸಲಹೆ ನೀಡಿದರು. ರಾಮಮಂದಿರದ ನಿರ್ಮಾಣ ಬೇಗ ಆಗುವಂತೆ ತೀರ್ಮಾನವಾಗಬೇಕು. ರಾಮಮಂದಿರ ನಿರ್ಮಾಣದಿಂದ ಯಾವುದೇ ಪಕ್ಷ ಅಥವಾ ಧರ್ಮಕ್ಕೆ ಹಾನಿಯಿಲ್ಲ ಎಂದವರು ನುಡಿದರು.

ಹಿಂದುತ್ವ ಜಾಗೃತ: ನನಗೆ ದೇಶದ ಎಲ್ಲಾ ಪಕ್ಷಗಳು ಸಮಾನ. ಕಳೆದ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಹೋರಾಟ ನಡೆಸಬೇಕಿತ್ತು. ಬಿಜೆಪಿ ಕೋಮುವಾದಿ ಎಂದು ಸೋಲಿಸಲು ಎಲ್ಲಾ ಪಕ್ಷಗಳು ಪಣತೊಟ್ಟವು. ಈ ಬೆಳವಣಿಗೆಯಿಂದ ಹಿಂದೂಗಳಲ್ಲಿ ಹಿಂದುತ್ವ ಜಾಗೃತವಾಯಿತು. ಚುನಾವಣೆಯಲ್ಲಿ ಹಿಂದೂ ವಿರೋಧ ದೃಷ್ಟಿಕೋನ ಹೆಚ್ಚಾಯಿತು. ಪ್ರಚಾರ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರ ಚರ್ಚೆಯೇ ಆಗಿಲ್ಲ ಎಂದವರು ನುಡಿದರು.

ಈ ಬಾರಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ಮತದಾನವಾಗಿದೆ. ಇನ್ನು ಮುಂದಾದರೂ ಅಭಿವೃದ್ಧಿ ವಿಚಾರ ಮಾತನಾಡಿ, ಹಿಂದೂ ವಿಚಾರ ತೆಗೆದರೆ ಬಹುಸಂಖ್ಯಾತ ಹಿಂದೂಗಳು ಜಾಗೃತರಾಗುತ್ತಾರೆ. ಹೊಂದಾಣಿಕೆ ಮಾಡಿಕೊಳ್ಳದೇ ಪ್ರತ್ಯೇಕ ಹೋರಾಟ ಮಾಡಿದ್ದರೆ ವಿಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲುತಿದ್ದವು ಎಂದವರು ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಸರಕಾರದಿಂದ ತಾವು ಏನನ್ನು ನಿರೀಕ್ಷಿಸುತ್ತೀರಿ ಎಂದು ಪ್ರಶ್ನಿಸಿದಾಗ, ದೇಶದ ರಕ್ಷಣೆ, ಕಾಶ್ಮೀರ ಸಮಸ್ಯೆ ಬಗೆಹರಿಯಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು, ಕೃಷಿಗೆ ಉತ್ತೇಜನ ಹಾಗೂ ಕೃಷಿಗೆ ಅಡ್ಡಿಯಾಗ ದಂತೆ ಉದ್ಯಮಗಳು ಸ್ಥಾಪನೆಯಾಗಬೇಕು ಎಂದರು.

ಹೊಸದಿಲ್ಲಿಯಲ್ಲಿ ಎರಡನೇ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಕುರಿತು ಪ್ರಶ್ನಿಸಿದಾಗ, ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆದಿದೆ. ಜನರಲ್ಲಿ ಮೋದಿಯ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿದೆ. ನಾನು ಎರಡೂ ಬಾರಿಯೂ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News