ಧಾರ್ಮಿಕ ಕ್ಷೇತ್ರಗಳಂತೆ ಶಾಲೆಗಳನ್ನೂ ಪ್ರೀತಿಸಿ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ, ಜೂ. 1: ದೇವಸ್ಥಾನ, ಮಸೀದಿ, ಚರ್ಚ್‍ಗಳಂತೆ ಶಾಲೆಗಳನ್ನೂ ಪ್ರೀತಿಸಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಕಲ್ಲಡ್ಕ ಜಿ.ಪಂ.ಮಾದರಿ ಹಿ.ಪ್ರಾ.ಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗವನ್ನು ಶನಿವಾರ ಉದ್ಘಾಟಿಸಿ, ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬದ ವಿಜ್ಞಾಪನಾ ಪತ್ರ "ಮುನ್ನೋಟ" ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಶಾಲೆಗಳು ಮತ್ತು ವಾತಾವರಣ ಜೀವನಪಾಠವನ್ನು ಹೇಳಿಕೊಡುತ್ತಿದೆ. ನಗರ ಕೇಂದ್ರಿತ ಶಿಕ್ಷಣಕ್ಕಿಂತ ಗ್ರಾಮೀಣ ಪ್ರದೇಶದ ಶಿಕ್ಷಣ ಸೊಗಸು, ಇದಕ್ಕೆ ಕಲ್ಲಡ್ಕ ಉದಾಹರಣೆ ಎಂದರು.
ಕಾಲ ಕಳೆಯುತ್ತಿದ್ದಂತೆಯೇ, ಸ್ಪರ್ಧಾತ್ಮಕ ಮನೋಭಾವವೂ ಅಗತ್ಯವಿದ್ದು, ಕನ್ನಡದ ಜೊತೆಗೆ ಇಂಗ್ಲಿಷ್‍ಗೂ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ಶತಮಾನೋತ್ತರ ಬೆಳ್ಳಿಹಬ್ಬದ ಸುಸಂದರ್ಭದಲ್ಲಿ ಹೊಸರೂಪ ಪಡೆದುಕೊಂಡಿರುವ ಕಲ್ಲಡ್ಕ ಸರಕಾರಿ ಶಾಲೆ ಮತ್ತಷ್ಟು ವರ್ಷಗಳ ಕಾಲ ಶಿಕ್ಷಣದ ಧಾರೆ ಎರೆಯುವಂತಾಗಲಿ ಎಂದರು.
ದಾನಿ ರಾಜೇಂದ್ರ ಹೊಳ್ಳರು ಮಾತನಾಡಿ, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಮುತುವರ್ಜಿಯಿಂದ ಶಾಲೆ ಅಭಿವೃದ್ಧಿ ಯತ್ತ ಮುಖ ಮಾಡುತ್ತಿದೆ, ಎಲ್ಲಾ ಪೊಷಕರ ಸಹಕಾರ ಅಗತ್ಯ ಇದೆ ಎಂದರು. ದಾನಿ ಶಿವರಾಮ ಹೊಳ್ಳರು ಮಾತನಾಡಿ, ಆಂಗ್ಲಮಾಧ್ಯಮ ಆರಂಭಗೊಂಡಿರುವುದು ಶಾಲೆಗೆ ಹೊಸ ಬಲ ತಂದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ ಪಡೆದುಕೊಳ್ಳಬೇಕಿದೆ ಎಂದರು.
ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ನಾಗೇಶ್.ಕೆ ಹಾಗೂ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿದರು.
ತಾಪಂ ಸದಸ್ಯ ಮಹಾಬಲ ಆಳ್ವ, ಕರ್ನಾಟಕ ಬೀಡಿ ಮಾಲಕ ಮುಹಮ್ಮದ್ ಶಾಫಿ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯೆ ಆಯಿಷಾ, ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಉಪಾಧ್ಯಕ್ಷ ಶಿವಶಂಕರ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್, ಶಿಕ್ಷಣ ಸಂಯೋಜಕಿ ಸುಶೀಲಾ, ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್‍ನ ವ್ಯವಸ್ಥಾಪಕ ಸುರೇಶ್ ಆಚಾರ್ಯ, ಎಸ್‍ಡಿಎಂಸಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ವೇದಿಕೆಯಲ್ಲಿದ್ದರು.
ಶಾಲಾ ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕಲ್ಲಡ್ಕ ಶಾಲೆಯ ಗತವೈಭವ ಮತ್ತೆ ಮರುಕಳಿಸುವ ಹಂತದಲ್ಲಿದ್ದು, ಶಾಲಾ ಏಳಿಗೆಗೆ ಸರ್ವರ ಸಹಕಾರ ಅಗತ್ಯ ಎಂದರು. ಶಿಕ್ಷಕಿ ಸಂಗೀತಾ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಶಿಕ್ಷಕಿ ವಾರಿಜಾಕ್ಷಿ ವಂದಿಸಿದರು.
ಇದೇ ಸಂದರ್ಭ ಕಲ್ಲಡ್ಕ ರೈತರ ಸೇವಾಸಹಕಾರಿ ಸಂಘದ ವತಿಯಿಂದ ನೀಡಲಾದ ಲ್ಯಾಪ್‍ಟಾಪ್ ಹಾಗೂ ಪ್ರಾಜೆಕ್ಟರ್‍ಗಳನ್ನು ಹಾಗೂ ಶತಮಾನೋತ್ತರ ಬೆಳ್ಳಿಹಬ್ಬಸಮಿತಿಯ ಕೊಡುಗೆಯಾದ 3 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ಶಾಸಕರು ಶಾಲೆಗೆ ಹಸ್ತಾಂತರಿಸಲಾಯಿತು.