×
Ad

ಫಲಿಮಾರಿನಲ್ಲಿ ವಿದ್ಯತ್ ಟವರ್ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ

Update: 2019-06-01 18:38 IST

ಪಡುಬಿದ್ರಿ: ಫಲಿಮಾರು ಅಣೆಕಟ್ಟು ಬಳಿ ಖಾಸಗಿ ಸ್ಥಳದಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಸ್ಥಳೀಯರು ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ನಂದಿಕೂರು ಸಬ್‍ಸ್ಟೇಷನ್‍ನಿಂದ ಮೂಲ್ಕಿ ಸಬ್‍ಸ್ಟೇಷನ್‍ಗೆ 110 ಕೆವಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಮುಂದಾಗಿತ್ತು. ಇಂದು ಬೆಳಗ್ಗೆ ಫಲಿಮಾರಿನ ಗ್ರಾಮ ಪಂಚಾಯಿತಿಯ ಮೂಡುಫಲಿಮಾರು ಅಣೆಕಟ್ಟು ಬಳಿ ಸರ್ವೇ ಕಾರ್ಯ ನಡೆಸಲು ಮುಂದಾಗುತಿದ್ದಂತೆಯೇ ಸ್ಥಳೀಯರು ತಡೆಯೊಡ್ಡಿದರು. ಕೂಡಲೇ ಸ್ಥಳಕ್ಕೆ ಕುಂದಾಪುರ ಎಸಿ ಮಧುಕೇಶ್ವರ, ತಹಸೀಲ್ದಾರ್ ರಶ್ಮಿ, ಕೆಪಿಟಿಸಿಎಲ್ ಅಧಿಕಾರಿ ರವಿಕಾಂತ್ ಕಾಮತ್ ಸ್ಥಳಕ್ಕೆ ಬಂದು ಸ್ಥಳೀಯರೊಂದಿಗೆ ಚರ್ಚಿಸಿದರು. 

ಆದರೆ ಸ್ಥಳೀಯರು ಈ ಪ್ರದೇಶಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಟವರ್‍ಗಳನ್ನು ಅಳವಡಿಸಬಾರದು. ಈ ಭಾಗವು ಜನವಸತಿ ಪ್ರದೇಶ ವಾಗಿರುವುದರಿಂದ ವಿದ್ಯುತ್ ಟವರ್ ಅಳವಡಿಸಿದಲ್ಲಿ ಜನರು ಆತಂಕದಲ್ಲಿ ಜೀವಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಥಳೀಯರನ್ನು ಸಮಾಧಾನಪಡಿಸಿದ ಎಸಿ ಮಧುಕೇಶ್ವರ್, ಈ ಟವರ್‍ನಿಂದ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಡಿಸಿಯ ಆದೇಶದಂತೆ ಈ ಕಾಮಗಾರಿ ನಡೆಸುತಿದ್ದೇವೆ. ನಂದಿಕೂರು ಸಬ್‍ಸ್ಟೇಷನಿಂದ ಮುಲ್ಕಿಗೆ ವಿದ್ಯುತ್ ಸರಬರಾಜು ಮಾಡಲು ಟವರ್‍ಗಳ ನಿರ್ಮಾಣವಾಗಬೇಕಾಗಿದೆ. ಟವರ್ ಅಳವಡಿಸಿದ ಜಾಗದ ಮಾಲೀಕರಿಗೆ ಪರಿಹಾರ ಧನವನ್ನು ವಿತರಿಸಲಾಗುವುದು ಎಂದರು.

ಪಟ್ಟು ಬಿಡದ ಸ್ಥಳೀಯರು ಈ ಜಾಗದ ಬದಲು ಪರ್ಯಾಯ ಜಾವನ್ನು ಗುರುತಿಸುವಂತೆ ಆಗ್ರಹಿಸಿದರು. ಬಳಿಕ ಸ್ಥಳೀಯರು ಪಕ್ಕದ ಇನ್ನೊಂದು ಜಾಗವು ಜನವಸತಿ ಇಲ್ಲದೆ ಇರುವುದರಿಂದ ಅಲ್ಲಿ ಟವರ್ ಅಳವಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀತೇಂದ್ರ ಪುರ್ಟಾಡೋ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಫಲಿಮಾರು ಆಗ್ರಹಿಸಿದರು.

ಈ ಬಗ್ಗೆ ಕೆಪಿಟಿಸಿಎಲ್ ಅಧಕಾರಿಗಳಿಗೆ ಪರ್ಯಾಯ ಜಾಗವನ್ನು ಗುರುತಿಸಿ ಸರ್ವೇ ನಡೆಸಿ ಮುಂದಿನ ಕ್ರಮಕೈಗೊಳ್ಳುವಂತೆ ಸೂಚಿಸಿದ ಬಳಿಕ ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಕೆಪಿಟಿಸಿಎಲ್ ಅಧಿಕಾರಿಗಳಾದ ಗಂಗಾಧರ, ಭಾರತಿ, ರಾಜನ್, ಕಂದಾಯ ಇಲಾಖೆಯ ರವಿಶಂಕರ್, ಪಿಡಿಓ ಸತೀಶ್, ಗ್ರಾಮಕರಣಿಕ ಲೋಕನಾಥ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News