ಕಾಪು: ಸಮುದ್ರದಲ್ಲಿ ಮುಳುಗಿ ಮೀನುಗಾರ ಸಾವು
Update: 2019-06-01 18:41 IST
ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಮೂಳೂರು ಫಿಶರೀಸ್ ರಸ್ತೆ ಬಳಿಯ ನಿವಾಸಿ ಮಾಧವ ಸಾಲ್ಯಾನ್ (60) ಮೃತರು ಎಂದು ಗುರುತಿಸಲಾಗಿದೆ.
ಮಾಧವ ಸಾಲ್ಯಾನ್, ಅವರು ಹಲವು ವರ್ಷಗಳಿಂದ ತನ್ನ ನೆರೆಮನೆ ನಿವಾಸಿ ಧನಂಜಯ ಸುವರ್ಣ ಅವರ ಜೊತೆಗೂಡಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದರು.
ಶುಕ್ರವಾರ ಸಂಜೆ ಕೂಡಾ ಎಂದಿನಂತೆ ಮೀನು ಹಿಡಿಯಲು ಸಮುದ್ರಕ್ಕೆ ಎಸೆದಿದ್ದ ಬಲೆಯನ್ನು ಎಳೆದುಕೊಂಡು ಬರುವಾಗ ಮಾಧವ ಅವರು ಗಾಳಿಯ ರಭಸಕ್ಕೆ ಸಮುದ್ರದ ಅಲೆಯ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದರು. ಘಟನೆ ನಡೆದ 4 ಗಂಟೆಗಳ ಬಳಿಕ ರಾತ್ರಿ 10.30ರ ವೇಳೆಗೆ ಮಾಧವ ಅವರ ಶವ ಕಾಪು ಪಡು ಶಾಲೆ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.