×
Ad

ಮುಂಬಡ್ತಿಗೆ ಪರಿಗಣಿಸದ ಸರ್ಕಾರಿ ನೀತಿಗೆ ವಿರೋಧ: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಪ್ರತಿಭಟನೆ

Update: 2019-06-01 20:15 IST

ಪುತ್ತೂರು: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಸೇವಾನಿರತ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರನ್ನು ಮುಂಬಡ್ತಿಗೆ ಪರಿಗಣಿಸದೆ 6ರಿಂದ 8ನೇ ತರಗತಿ ತನಕ ಬೋಧಿಸಲು ನೇರ ನೇಮಕಾತಿ ನಡೆಸುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಪುತ್ತೂರು ತಾಲೂಕು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ನೇತೃತ್ವದಲ್ಲಿ ಶನಿವಾರ ಸಂಜೆ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಎದುರು ಶಿಕ್ಷಕರು ಧರಣಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ತಾಲೂಕು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ಅಧ್ಯಕ್ಷ ವಿಮಲ್‍ ಕುಮಾರ್ ನೆಲ್ಯಾಡಿ ಅವರು, 1ರಿಂದ 1ನೇ ತರಗತಿ ತನಕ ಬೋಧಿಸಲು ನೇಮಕಗೊಂಡಿರುವ ಶಿಕ್ಷಕರು 2005 ರಿಂದ 8ನೇ ತರಗತಿ ಆರಂಭವಾಗಿನಿಂದಲೂ 8ನೇ ತರಗತಿ ವರೆಗೆ ಬೋಧಿಸುತ್ತಾ ಬಂದಿದ್ದಾರೆ. ಸೇವಾನುಭವ ಹೊಂದಿರುವ  ಶಿಕ್ಷಕರು 6ರಿಂದ 8ನೇ ತರಗತಿಯನ್ನು ಕಳೆದ 14 ವರ್ಷಗಳಿಂದ ಬೋಧಿಸುತ್ತಾ ಬಂದಿದ್ದಾರೆ. ಆದರೆ ಅವರನ್ನು ಮುಂಬಡ್ತಿಗೆ ಪರಿಗಣಿಸದೆ ಒಂದರಿಂದ 5ನೇ ತರಗತಿ ತನಕ ಬೋಧಿಸುವ ಶಿಕ್ಷಕರೆಂದು ಆದೇಶ ಹೊರಡಿಸಿರುವುದು ಹಾಗೂ 6ರಿಂದ 8ನೇ ತರಗತಿ ಬೋಧನೆಗಾಗಿ ನೇರ ನೇಮಕಾತಿ ನಡೆಸುತ್ತಿರುವ ಸರ್ಕಾರದ ಕ್ರಮದಿಂದಾಗಿ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. 

6-8 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಿಗೆ 2 ಬಾರಿ ನೇರ ನೇಮಕಾತಿ ಮಾಡಲಾಗಿದ್ದು, ಇದೀಗ ಮೂರನೇ ಬಾರಿಗೆ ನೇರ ನೇಮಕಾತಿ ನಡೆಯುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಸಚಿವರಿಗೆ ಮನವರಿಕೆ ಮಾಡಲಾಗಿದ್ದರೂ, ವರ್ಷದ ಹಿಂದೆ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರೂ ಈ ತನಕ ನ್ಯಾಯ ಸಿಕ್ಕಿಲ್ಲ. ಹೀಗೆಯೇ ಮುಂದುವರಿದಲ್ಲಿ ನಾವು ಹೆಚ್ಚುವರಿ ಶಿಕ್ಷಕರಾಗಿ ಜಿಲ್ಲೆ ದಾಟಿ ಹೋಗಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದರು.

ತಾಲೂಕು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇದಿಕೆಯ ಸಂಚಾಲಕ ದಿನೇಶ್ ಮಾಚಾರ್, ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪುರಂದರ ಗೌಡ, ಸಂಘದ ಖಜಾಂಜಿ ಸ್ಟೇನಿ ಪ್ರವೀಣ್ ಮಸ್ಕರೇನ್ಹಸ್, ಶ್ರೀಗುರು ಯೋಗ ಕೇಂದ್ರದ ಜಿಲ್ಲಾಧ್ಯಕ್ಷ ರಾಮಣ್ಣ ರೈ, ಶಿಕ್ಷಕ ಸಂಘಟನೆಯ ಪ್ರಮುಖರಾದ ಮಲ್ಲಿಕಾ ,ತೇಜಸ್ವಿನಿ ಅಂಬೆಕಲ್ಲು, ಕುಮಾರ್.ಕೆ.ಜೆ, ಪ್ರದೀಪ್, ಪ್ರಶಾಂತ್ ಪಿ.ಎಲ್.ಸುಧೀರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ನಾಳೆಯಿಂದ 1ರಿಂದ 5 ತನಕ ಮಾತ್ರ ಬೋಧಿಸುತ್ತೇವೆ. 6ರಿಂದ 8 ತನಕದ ತರಗತಿ ಬೋಧನೆಯನ್ನು ಬಹಿಷ್ಕರಿಸುತ್ತೇವೆ ಎಂಬ ಆಗ್ರಹ ಮತ್ತು ಎಚ್ಚರಿಕೆಯನ್ನೊಳ ಗೊಂಡ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News