2ನೇ ನಿಮಿಷದಲ್ಲೇ ಸಲಾಹ್ ಗೋಲು: ಲಿವರ್‌ಪೂಲ್‌ಗೆ ಪ್ರಶಸ್ತಿ
ಮ್ಯಾಡ್ರಿಡ್: ಸ್ಟಾರ್ ಆಟಗಾರ ಮುಹಮ್ಮದ್ ಸಲಾಹ್ ಅತ್ಯಂತ ವೇಗದ ಗೋಲು ಗಳಿಸುವ ಮೂಲಕ ತೊಟ್ಟೆನ್‌ಹ್ಯಾಮ್ ಹಾಟ್‌ಸ್ಪರ್ ತಂಡವನ್ನು 2-0 ಗೋಲುಗಳಿಂದ ಬಗ್ಗುಬಡಿದು ಆರನೇ ಬಾರಿಗೆ ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲಲು ನೆರವಾದರು.
ಆಟ ಆರಂಭವಾಗಿ ಎರಡು ನಿಮಿಷಗಳಿಗೂ ಮುನ್ನವೇ ಎದುರಾಳಿ ತಂಡದ ಮೌಸ್ಸಾ ಸಿಸೋಕೊ ಕೈಯಲ್ಲಿ ಚೆಂಡನ್ನು ಹಿಡಿದ ಕಾರಣಕ್ಕಾಗಿ ದಂಡನೆ ಎದುರಿಸಬೇಕಾಯಿತು. ಹೀಗೆ ದೊರಕಿದ ಸ್ಪಾಟ್ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಸಲಾಹ್, ತಮ್ಮ ತಂಡಕ್ಕೆ ಮಿಂಚನ ಮುನ್ನಡೆ ಗಳಿಸಿಕೊಟ್ಟರು.
ಲಿವರ್‌ಪೂಲ್ ಗೋಲ್‌ಕೀಪರ್ ಅಲಿಸ್ಸನ್ ಬೆಕರ್ ಹಲವು ಬಾರಿ ಆತ್ಮವಿಶ್ವಾಸದಿಂದ ಎದುರಾಳಿಗಳ ಗೋಲಿನ ಪ್ರಯತ್ನವನ್ನು ತಡೆದು ತಂಡದ ಮುನ್ನಡೆಯನ್ನು ಅಬಾಧಿತವಾಗಿಸಿದರು. 87ನೇ ನಿಮಿಷದಲ್ಲಿ ಬದಲಿ ಆಟಗಾರ ಒರಿಗಿ, ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸುವ ಮೂಲಕ ಗೆಲುವಿನ ಅಂತರ ಹೆಚ್ಚಿಸಿದರು.
ಅಂತಿಮವಾಗಿ ಮೆಟ್ರೊಪಾಲಿಟನೊ ಸ್ಟೇಡಿಯಂನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಲಿವರ್‌ಪೂಲ್ ಅಭಿಮಾನಿಗಳು ಸಂತಸದ ಕಡಲಲ್ಲಿ ತೇಲಾಡಿದರು. ಕಳೆದ ವರ್ಷದ ಫೈನಲ್‌ನಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧ ಮತ್ತು ಪ್ರಿಮಿಯರ್ ಲೀಗ್ ಪ್ರಶಸ್ತಿ ಸುತ್ತಿನಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಅನುಭವಿಸಿದ ಸೋಲಿನ ಬೇಸರ ಈ ಅದ್ಭುತ ಗೆಲುವಿನೊಂದಿಗೆ ಮಾಯವಾಯಿತು.
ತಂಡದ ಸಾರಥ್ಯ ವಹಿಸಿಕೊಂಡ ಮೂರೂವರೆ ವರ್ಷಗಳ ಬಳಿಕ ಮೊದಲ ಟ್ರೋಫಿ ಎತ್ತಿಹಿಡಿದ ಲಿವರ್‌ಪೂಲ್‌ನ ಜಾರ್ಗನ್ ಕ್ಲೋಪ್, ಸತತ ಆರು ಫೈನಲ್‌ಗಳ ಸೋಲಿನ ಸರಪಣಿ ಕಳಚಿಕೊಂಡರು. ಈ ಟ್ರೋಫಿಯೊಂದಿಗೆ ಲಿವರ್‌ಪೂಲ್ ತಂಡ ಆರನೇ ಯೂರೋಪಿಯನ್ ಕಪ್ ಗೆದ್ದುಕೊಂಡಂತಾಯಿತು. 1977, 1978, 1981, 1984 ಹಾಗೂ 2005ರಲ್ಲಿ ಲಿವರ್‌ಪೂಲ್ ತಂಡ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದಿತ್ತು.