ಫುಟ್‌ಬಾಲ್ ಮಾಂತ್ರಿಕ ನೇಮರ್ ಮೇಲೂ 'ಮೀ ಟೂ' ತೂಗುಗತ್ತಿ !

Update: 2019-06-02 04:31 GMT

ರಿಯೊ ಡೆ ಜನೈರೊ (ಬ್ರೆಝಿಲ್): ಖ್ಯಾತ ಫುಟ್‌ಬಾಲ್ ಆಟಗಾರ ನೇಮರ್, ಪ್ಯಾರಿಸ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯರೊಬ್ಬರು ದೂರು ನೀಡಿದ್ದಾರೆ. ಆದರೆ ನೇಮರ್ ತಂದೆ ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದು, ಇದು ಬ್ಲ್ಯಾಕ್‌ಮೇಲ್ ಯತ್ನ ಎಂದು ಹೇಳಿದ್ದಾರೆ.

ಸಾವೊ ಪಾಲೊ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಈ ಆಟಗಾರ, "ಸಂತ್ರಸ್ತೆಯ ಒಪ್ಪಿಗೆ ಇಲ್ಲದೇ ಹಿಂಸಾತ್ಮಕ ಮಾರ್ಗ ಅನುಸರಿಸಿ, ಆಕೆಯ ಜತೆ ಲೈಂಗಿಕ ಸಂಪರ್ಕ ಸಾಧಿಸಿದ್ದರು"

ಆದರೆ ದೂರಿನ ಪ್ರತಿನಿಧಿಗಳನ್ನು ಮಾಧ್ಯಮಗಳಿಗೆ ನೀಡಲು ಸಾವೊ ಪೋಲೊ ಭದ್ರತಾ ಸಚಿವಾಲಯ ನಿರಾಕರಿಸಿದ್ದಾರೆ. ಸ್ಟಾರ್ ಆಟಗಾರನ ವಿರುದ್ಧ ದೂರು ದಾಖಲಾಗಿರುವುದು ನಿಜ; ಆದರೆ ದೂರಿನ ಅಂಶಗಳು ವರ್ಗೀಕೃತವಾಗಿರುವುದರಿಂದ ಅದನ್ನು ಬಹಿರಂಗಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಬ್ರೆಝಿಲ್‌ನಲ್ಲಿ ವಾಸವಿರುವ ಈ ಮಹಿಳೆ, ಇನ್‌ಸ್ಟಾಗ್ರಾಂ ಮೂಲಕ ನೇಮರ್ ಅವರನ್ನು ಸಂಪರ್ಕಿಸಿದ್ದು, ಪರಸ್ಪರ ಸಂದೇಶ ವಿನಿಮಯದ ಬಳಿಕ, ನೇಮರ್, ಮಧ್ಯಾಹ್ನದ ವೇಳೆ ಪ್ಯಾರಿಸ್‌ನಲ್ಲಿ ಭೇಟಿಯಾಗುವಂತೆ ಆಹ್ವಾನಿಸಿದ್ದರು ಎಂದು ಹೇಳಲಾಗಿದೆ. ಹೋಟೆಲ್‌ಗೆ ಆಗಮಿಸಿದ ನೇಮರ್ ಅವರಿಗೆ ಅಮಲು ಏರಿತ್ತು. ಇಬ್ಬರೂ ಪರಸ್ಪರ ಮಾತನಾಡಿಕೊಂಡು ಬಳಿಕ ಮುದ್ದಾಡಿಕೊಂಡರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದ್ದಕ್ಕಿದ್ದಂತೆ ವ್ಯಗ್ರರಾದ ನೇಮರ್, ತನ್ನ ಒಪ್ಪಿಗೆ ಇಲ್ಲದೇ ಲೈಂಗಿಕ ಸಂಪರ್ಕ ಸಾಧಿಸಲು ಹಿಂಸಾತ್ಮಕ ಮಾರ್ಗ ಅನುಸರಿಸಿದರು ಎಂದು ಮಹಿಳೆ ದೂರು ನೀಡಿದ್ದಾರೆ.

ಆದರೆ ಇದು ಬ್ಲ್ಯಾಕ್‌ಮೇಲ್ ಪ್ರಯತ್ನ. ನನ್ನ ಮಗ ಯಾವ ಅಪರಾಧವನ್ನೂ ಎಸಗಿಲ್ಲ. ಎಲ್ಲ ಪುರಾವೆಗಳು ನಮ್ಮಲ್ಲಿದ್ದು, ಈಗಾಗಲೇ ವಕೀಲರಿಗೆ ಹಸ್ತಾಂತರಿಸಿದ್ದೇವೆ ಎಂದು ನೇಮರ್ ಅವರ ತಂದೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News