×
Ad

ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಟ್ವಿಟರ್ ಖಾತೆ ಮಾಯ

Update: 2019-06-02 10:55 IST

  ಹೊಸದಿಲ್ಲಿ, ಜೂ.2: ಕಾಂಗ್ರೆಸ್ ವಕ್ತಾರೆ ದಿವ್ಯಾ ಸ್ಪಂದನಾ ತನ್ನ ಟ್ವಿಟರ್ ಖಾತೆಯನ್ನು ಅಳಿಸಿಹಾಕಿರುವಂತೆ ಕಾಣುತ್ತಿದೆ. ಕನ್ನಡ ಚಿತ್ರರಂಗದಲ್ಲಿ ರಮ್ಯಾ ಎಂದೇ ಖ್ಯಾತಿ ಪಡೆದಿರುವ ಸ್ಪಂದನಾರ ಪ್ರೊಫೈಲ್ ಪೇಜ್‌ನಲ್ಲಿ ‘ಈ ಖಾತೆ ಅಸ್ತಿತ್ವದಲ್ಲಿಲ್ಲ’’ ಎಂದು ಬರೆಯಲಾಗಿದೆ. ಶನಿವಾರ ಬೆಳಗ್ಗೆಯಿಂದ ಸ್ಪಂದನಾರ ಟ್ವಿಟರ್ ಖಾತೆಯಲ್ಲಿ ಯಾವುದೇ ಟ್ವೀಟ್‌ಗಳು ಕಾಣಿಸಿಕೊಂಡಿಲ್ಲ. ಅವರ ಟ್ವಿಟರ್ ಬಯೋದಲ್ಲಿ ಅವರು ಕಾಂಗ್ರೆಸ್ ಸಾಮಾಜಿಕ ತಾಣದ ಮುಖ್ಯಸ್ಥರು ಎಂದು ನಮೂದಿಸಲಾಗಿಲ್ಲ.

 ಸ್ಪಂದನಾ ಟ್ವಿಟರ್‌ನಿಂದ ಮಾಯವಾಗಲು ಕಾರಣವೇನೆಂಬ ಕುರಿತು ಕಾಂಗ್ರೆಸ್ ಆಗಲಿ ಅಥವಾ ಸ್ಪಂದನಾ ಅವರಾಗಲಿ ಅಧಿಕೃತವಾಗಿ ಖಚಿತಪಡಿಸಿಲ್ಲ. ಕಾಂಗ್ರೆಸ್‌ನಿಂದ ದೂರವಾಗಿದ್ದೀರಾ? ಎಂದು ಸ್ಪಂದನಾರ ಬಳಿ ಸುದ್ದಿಸಂಸ್ಥೆಯೊಂದು ಪ್ರಶ್ನಿಸಿದಾಗ, ನಿಮ್ಮ ಸುದ್ದಿ ಮೂಲ ತಪ್ಪು ಎಂದು ಪ್ರತಿಕ್ರಿಯಿಸಿದರು.

 ಸ್ಪಂದನಾ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಪಸ್ಥಿತಿಗೆ ಹೊಸ ತಿರುವು ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಿಜೆಪಿಯನ್ನು ಟೀಕಿಸಲು ಅವರ ಟ್ವಿಟರ್‌ನ್ನು ಹೆಚ್ಚು ಬಳಸುತ್ತಿದ್ದರು. ತನ್ನ ಕೊನೆಯ ಟ್ವೀಟ್‌ನಲ್ಲಿ ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅಭಿನಂದನೆ ಸಲ್ಲಿಸಿದ್ದರು.

ಗುರುವಾರ ತನ್ನ ವಕ್ತಾರರು ಟಿವಿ ಚರ್ಚೆಗಳಲ್ಲಿ ಒಂದು ತಿಂಗಳ ಕಾಲ ಭಾಗವಹಿಸದಂತೆ ಕಾಂಗ್ರೆಸ್ ನಿಷೇಧ ಹೇರಿತ್ತು. ಎಲ್ಲ ಮಾಧ್ಯಮ ಚಾನಲ್‌ಗಳು/ಸಂಪಾದಕರು ತಮ್ಮ ಶೋಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಗಳಿಗೆ ಸ್ಥಾನ ನೀಡದಂತೆ ಮನವಿ ಮಾಡುತ್ತಿದ್ದೇವೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News