ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕ-ಕ್ಯಾಂಪಸ್ ವಿಂಗ್: ಈದ್ ಕಿಟ್ ವಿತರಣೆ, ವಿದ್ಯಾರ್ಥಿಗಳಿಗೆ ಸನ್ಮಾನ

Update: 2019-06-02 07:31 GMT

ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕ ಮತ್ತು ಕ್ಯಾಂಪಸ್ ವಿಂಗ್ ಇದರ ವತಿಯಿಂದ 5ನೆ ವರ್ಷದ ರಮಝಾನ್ ಪ್ರಯುಕ್ತ ಈದ್‌ಕಿಟ್ ವಿತರಣೆ ಹಾಗೂ ಶಾಲಾ-ಮದ್ರಸ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಬಂಟ್ವಾಳ ಪೇಟೆಯ ಶೈಮ್ ಅಪಾರ್ಟ್ ಬಳಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯದ ಅಧ್ಯಕ್ಷ ಇರ್ಶಾದ್ ದಾರಿಮಿ ದುಆಃ ನೆರವೇರಿಸಿದರು. ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಡ್ಯಾರ್ ಕಣ್ಣೂರು ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಫೈಝಿ "ತೌಬಾ" ವಿಷಯದ ಕುರಿತು ಮುಖ್ಯ ಪ್ರಭಾಷಣ ಮಾಡಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ಈದ್ ಕಿಟ್ ವಿತರಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿದ 16 ಮಂದಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ರಿಯಾಝ್ ಹುಸೈನ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಅದೇ ರೀತಿ ಮದ್ರಸ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ಮನಾರುಲ್ ಇಸ್ಲಾಂ ಮದ್ರಸದ 16 ವಿದ್ಯಾರ್ಥಿಗಳಿಗೆ ಬಂಟ್ವಾಳ ಜಮಾಅತ್ ಕಮಿಟಿ ಅಧ್ಯಕ್ಷ ಹೈದರ್ ಅಲಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ವೇಳೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಅವರನ್ನು ಸನ್ಮಾನಿಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಅಧ್ಯಕ್ಷ ಇಸ್ಮಾಯಿಲ್ ಅರಬಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಂಟ್ವಾಳ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್, ಮಸೀದಿಯ ಖತೀಬ್ ಅಬ್ದುಲ್ ಹನೀಫಿ, ಸದರ್‌ಮುಹಲ್ಲಿ ಸಿದ್ದೀಕ್ ರಹ್ಮಾನಿ, ಶೈಮ್ ಗ್ರೂಪ್‌ನ ಮಾಲಕ ಮುಹಮ್ಮದ್ ಇಕ್ಬಾಲ್, ಬಿ.ಎಂ. ಬದ್ರುದ್ದೀನ್ ಉಪಸ್ಥಿತರಿದ್ದರು. ಜಮಾಅತ್‌ನ 50 ಮನೆಗಳಿಗೆ ಈದ್ ಕಿಟ್ ವಿತರಿಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಉಪಾಧ್ಯಕ್ಷ ಅನ್ವರ್ ಅಝ್ಹರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ವಂದಿಸಿ, ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಎಂ.ಸವಾಝ್ ಬಂಟ್ವಾಳ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News