ಮೋದಿ ಸರಕಾರ ಗೋರಕ್ಷಣೆಗಾಗಿ ಶೀಘ್ರವೇ ಕಾನೂನು ಜಾರಿಗೆ ತರಲಿ: ಪೇಜಾವರ ಶ್ರೀ

Update: 2019-06-02 12:25 GMT

ಉಡುಪಿ, ಜೂ. 2: ಕೇಂದ್ರದಲ್ಲಿ ಮೋದಿ ಸರಕಾರ ಗಟ್ಟಿಯಾಗಿ ಪೂರ್ಣ ಬಹುಮತದೊಂದಿಗೆ ಬಂದಿದ್ದು, ಅವರಿಗೆ ಯಾವುದೇ ಪಕ್ಷದ ಬೆಂಬಲವೂ ಬೇಕಾಗಿಲ್ಲ. ಆದುದರಿಂದ ಮೋದಿ ದೃಢ ಮನಸ್ಸು ಮಾಡಿ ಅತಿ ಶೀಘ್ರವೇ ಮೊದಲ ವರ್ಷವೇ ಗೋರಕ್ಷಣೆ ಕುರಿತು ಇಡೀ ದೇಶಕ್ಕೆ ಅನ್ವಯವಾಗುವ ಕಾನೂನು ಜಾರಿಗೆ ತರಬೇಕು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪರ್ಯಾಯ ಶ್ರೀಪಲಿಮಾರು ಮಠ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಸುವರ್ಣ ಗೋಪುರಮ್ ಸಮರ್ಪಣೋತ್ಸವದ ಪ್ರಯುಕ್ತ ಉಡುಪಿ ರಥಬೀದಿಯಲ್ಲಿ ರವಿವಾರ ಆಯೋಜಿಸಲಾದ ಗೋಪುರಮ್- ಭಾರತೀಯ ಗೋತಳಿಗಳ ಮಿಲನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ಎಲ್ಲರೂ ಹಸುವಿನ ಹಾಲನ್ನು ಅವಲಂಬಿಸಿ ದ್ದಾರೆ. ಅಂತಹ ಹಾಲು ಕೊಡುವ ಗೋವುಗಳನ್ನು ಕೊನೆಗೆ ಕಟುಕರ ಕೈಗೆ ಕೊಡುತ್ತಿದ್ದಾರೆ. ಆ ಗೋವುಗಳನ್ನು ಕೊಲ್ಲುವ ಮನಸ್ಸಿನವರು ಮಾನವರೇ ಅಲ್ಲ. ಅವರು ರಾಕ್ಷಸ ವರ್ಗಕ್ಕೆ ಸೇರ ಬೇಕಾಗುತ್ತದೆ. ಗೋ ಹತ್ಯೆ ಮಾಡಿ ಗೋ ಮಾಂಸ ಸೇವಿಸಿರುವುದು ಅತ್ಯಂತ ಹೇಯವಾದ ಕೃತ್ಯ ಎಂದು ಅವರು ಟೀಕಿಸಿದರು.

ಗೋವುಗಳ ರಕ್ಷಣೆ ಕೇವಲ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ ಆರ್ಥಿಕ ಹಾಗೂ ಮಾನವೀಯ ದೃಷ್ಠಿಯಿಂದಲೂ ಮುಖ್ಯವಾಗಿದೆ. ಪಶು ಸಂತತಿ ಉಳಿದರೆ ಮಾತ್ರ ನಾವು ಸಂತೋಷದಿಂದ ಬದುಕಲು ಸಾಧ್ಯ. ಗೋವುಗಳ ಸಮೃದ್ಧಿಯಿಂದ ನಮ್ಮ ಸಮೃದ್ದಿಯಾಗುತ್ತದೆ. ಹೀಗೆ ಎಲ್ಲ ದೃಷ್ಠಿಯಿಂದಲೂ ಗೋವಿನ ರಕ್ಷಣೆ ಆಗಬೇಕು. ಆದುದರಿಂದ ಪಶು ಸಂತತಿ ಬೆಳೆಯಬೇಕು ಎಂದರು.

ಅಳಿವಿನಂಚಿನಲ್ಲಿರುವ ಹುಲಿ, ಸಿಂಹ ಸೇರಿದಂತೆ ವನ್ಯಜೀವಿಗಳ ಬಗ್ಗೆ ಸರಕಾರ ಗಳು ಹೆಚ್ಚು ಗಮನ ಕೊಡುತ್ತಿದೆ. ಆದರೆ ಗೋವು ಸಂತತಿ ಉಳಿಯಬೇಕೆಂದು ಯಾವ ಸರಕಾರಕ್ಕೂ ಕಾಳಜಿ ಇಲ್ಲ. ಇದರಿಂದ ಸಿಂಹ ಹುಲಿಗಳಿಗಿಂತಲೂ ಗೋವು ಕೀಳಾಗಿದೆ ಎಂದ ಅವರು, ಗೋವು ಮಾತ್ರವಲ್ಲದೆ ಕೃಷಿಗೆ ಸಹಕಾರ ವಾಗುವ ಎಮ್ಮೆ ಸಂತತಿ ಕೂಡ ಉಳಿಸಬೇಕು. ದೇಶಿ ತಳಿ ನೀಡುವ ಆರೋಗ್ಯ ಕರ ಹಾಲನ್ನು ಯಾವುದೇ ತಳಿ ನೀಡುವುದಿಲ್ಲ ಎಂದರು.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಮಾತನಾಡಿದರು.

ವೇದಿಕೆಯಲ್ಲಿ ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಶ್ರೀನಿವಾಸ ಪೆಜತ್ತಾಯ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರು. ಗೀರ್, ಮಲನಾಡು ಗಿಡ್ಡ, ಕಪಿಲ, ಸಾಯಿ ವಾಲ, ರಾಟಿ, ವೆಚ್ಚೂರು, ತಾರ್ ಪಾರ್ಕರ್, ಹರ್ಯಾಣ ಸೇರಿದಂತೆ ಹಲವು ದೇಶಿ ತಳಿಯ ಗೋವುಗಳ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News