'ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸರಕಾರ ಆದ್ಯತೆ ನೀಡಲಿ'
ಮಂಗಳೂರು, ಜೂ.2: ರಾಜ್ಯದಲ್ಲಿ 109 ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು 8 ತಿಂಗಳು ಕಳೆದಿದ್ದು, ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದರಿಂದ ನಗರಾಡಳಿತ ಸಂಸ್ಥೆಗಳು ಅತಂತ್ರ ಸ್ಥಿತಿಯಲ್ಲಿವೆ. ಈ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸ್ವತಂತ್ರ ಆಡಳಿತ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳುತ್ತಿರುವ ಸರಕಾರ ರಾಜಕೀಯ ಪ್ರವೇಶಕ್ಕೆ ಆಸ್ಪದ ನೀಡುತ್ತಿವೆ. ಇದರ ಪರಿಣಾಮ ಚುನಾವಣೆ ನಡೆದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೆ ಪಂಚಾತ್‌ಗಳಲ್ಲಿ ಅಧಿಕಾರಿಗಳೇ ಆಡಳಿತ ನಡೆಸುವಂತೆ ಆಗಿದೆ. ಮೀಸಲಾತಿ ಪಟ್ಟಿಗೆ ಆನೇಕಲ್, ಹೆಬ್ಬಗೋಳು, ಅತ್ತಿಬೆಲೆ, ಗುಬ್ಬಿ, ಧಾರವಾಡ, ರಾಯಭಾಗಗಳಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಇದನ್ನು ತೆರವುಗೊಳಿಸುವ ವಿಚಾರದಲ್ಲಿ ರಾಜ್ಯ ಸರಕಾರ ಆಸಕ್ತಿ ವಹಿಸುತ್ತಿಲ್ಲ. ಮುಖ್ಯಮಂತ್ರಿ ತನ್ನ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ಅವರಿಗೆ 109 ನಗರಾಡಳಿತ ಸಂಸ್ಥೆಗಳ ಆಡಳಿತ ನಿರ್ವಹಣೆ ಬೇಕಾಗಿಲ್ಲ. ಈಗ 63 ನಗರಾಡಳಿತ ಸಂಸ್ಥೆಗಳ ಚುನಾವಣೆ ಮುಕ್ತಾಯಗೊಂಡು ಫಲಿತಾಂಶ ಪ್ರಕಟವಾಗಿದೆ. ಇಲ್ಲಿಯೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಬೇಕು. ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸದಿದ್ದರೆ, ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ಕರಾವಳಿಗೆ 1 ಸಾವಿರ ಕೋ.ರೂ.ಬೇಡಿಕೆ: ಈ ಬಾರಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ 1 ಸಾವಿರ ಕೋ.ರೂ. ಬಿಡುಗಡೆಗಳಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಲಾಗಿದೆ. ಆದರೆ ಬಜೆಟ್‌ನಲ್ಲಿ 200 ಕೋ.ರೂ. ಮೀಸಲಿಟ್ಟಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿಯ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಕರಾವಳಿ ಜನತೆಗೆ ಬುದ್ಧಿ ಇಲ್ಲ ಎಂದು ಈ ಹಿಂದೆಯೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಇದೀಗ ಬರದ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನು ಕರೆಸಿ ಚರ್ಚೆ ನಡೆಸಲು ಮುಂದಾಗುತ್ತಿಲ್ಲ.ಸಮುದ್ರ ನೀರು ಶುದ್ಧೀಕರಿಸುವ ಯೋಜನೆ ಜಾರಿಗೆ ಬಿಜೆಪಿ ಒತ್ತಾಯಿಸಿದರೂ ಸರಕಾರ ಸ್ಪಂದಿಸುತ್ತಿಲ್ಲ. ಅವೈಜ್ಞಾನಿಕವಾದ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಲು ಆಸಕ್ತಿ ತೋರಿಸುತ್ತಿರುವ ಸರಕಾರ, ಕರಾವಳಿಯಲ್ಲಿ ನೀರಿನ ಬವಣೆ ಹೋಗಲಾಡಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.
ಜಿಂದಾಲ್ ಕಂಪನಿಗೆ 3,666 ಎಕರೆಯಷ್ಟು ಕೋಟ್ಯಂತರ ಮೊತ್ತ ಬೆಲೆಬಾಳುವ ಭೂಮಿಯನ್ನು ಚಿಲ್ಲರೆಕಾಸಿಗೆ ಪರಭಾರೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವುದು ಸರಿಯಲ್ಲ. ಈ ತೀರ್ಮಾನವನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಹೋರಾಟ ನಡೆಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ಎಕರೆಗೆ ಸುಮಾರು 2 ಕೋ.ರೂ.ಗೂ ಅಧಿಕ ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಕಂಪನಿಗೆ ಕೇವಲ 35 ಕೋಟಿ ರೂ.ಗೆ ಮಾರಾಟ ಮಾಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಆಡಳಿತದಲ್ಲಿ ಗುತ್ತಿಗೆಗೆ ಭೂಮಿ ನೀಡುವ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ ಈಗ ಭೂಮಿಯನ್ನು ಲೀಸ್‌ಗೆ ನೀಡುವ ಬದಲು ಮಾರಾಟ ಮಾಡುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಭೂಮಿ ಹಸ್ತಾಂತರದ ಹಿಂದೆ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಪಾಟೀಲ್ ಶಂಕಿಸಿದ್ದಾರೆ. ಜಿಂದಾಲ್ ಕಂಪನಿ ಮೇಲೆ ಲೋಕಾಯುಕ್ತ ಗಂಭೀರ ಆರೋಪ ಮಾಡಿರುವುದನ್ನು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಮೊಂಡುತನ ಪ್ರದರ್ಶಿಸದೆ, ಸಂಪುಟ ತೀರ್ಮಾನವನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಜನಾಭಿಪ್ರಾಯ ಚಳವಳಿ ನಡೆಸಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಜೂ.5ರಂದು ಬಿಜೆಪಿ ಶಾಸಕಾಂಗ ಸಭೆ
13 ಸಾವಿರ ಕೋಟಿ ರೂ.ಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ಸರಕಾರ, ಅದರ ಗುತಿಗೆದಾರರಿಗೆ ಮೊತ್ತ ಪಾವತಿಸಲು ಸಿದ್ಧತೆ ನಡೆಸಿದೆ. ಸಚಿವ ರೇವಣ್ಣ ಕೈಗೊಂಡ ನೀರಾವರಿ ಸಹಿತ ಎಲ್ಲ ಯೋಜನೆಗಳಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿಸಲಾಗಿದೆ ಎಂದು ಮೈತ್ರಿ ಕೂಟದ ಪಾಲುದಾರ ಕಾಂಗ್ರೆಸ್‌ನ ಮುಖಂಡರೇ ಆರೋಪಿಸಿದ್ದಾರೆ.
ಈ ಎಲ್ಲ ವಿಚಾರಗಳ ಕುರಿತು ಜೂ.5ರಂದು ಬೆಂಗಳೂರನಲ್ಲಿ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪಚರ್ಚೆ ನಡೆಸಲಿದ್ದಾರೆ. ಸರಕಾರದ ವೈಫಲ್ಯಗಳ ವಿರುದ್ಧ ಅಧಿವೇಶದಲ್ಲಿ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.