‘ಮಂಗಳೂರು ಬ್ಲೂಮ್’ ಯೋಜನೆಗೆ ಚಾಲನೆ
ಮಂಗಳೂರು, ಜೂ. 2: ಗಿರಿಜಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ‘ಮಂಗಳೂರು ಬ್ಲೂಮ್’ ಹೆಸರಿನಲ್ಲಿ ನಗರದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಹಸಿರು ಕ್ರಾಂತಿ ಯೋಜನೆಗೆ ರವಿವಾರ ನಗರದ ಲೇಡಿಹಿಲ್ ವೃತ್ತದಲ್ಲಿ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸರಕಾರಿ ಸ್ಥಳದಲ್ಲಿ ಮತ್ತು ರಸ್ತೆ ಡಿವೈಡರ್‌ನಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗೆ ಗಿಡ ನೆಡಲು ಆಸಕ್ತಿ ಇದ್ದರೂ ಪಾಲಿಕೆಯಿಂದ ಅನುಮತಿ ಪಡೆಯಲಿರುವ ಕಷ್ಟದಿಂದ ಹಿಂಜರಿಯುತ್ತಾರೆ. ಹೀಗಾಗಿ ಅನುಮತಿ ನೀಡುವ ವ್ಯವಸ್ಥೆಯನ್ನು ಸರಳೀಕರಿಸಬೇಕು ಎಂದರು.
ಯಾವುದೇ ಯೋಜನೆಗಳನ್ನು ಆರಂಭಿಸುವಾಗ ಇರುವ ಆಸಕ್ತಿ ಬಳಿಕವೂ ಇರಬೇಕು. ಕಡಿಮೆ ಕೆಲಸದ ಮೂಲಕ ನಿರಂತರತೆಯನ್ನು ಕಾಪಾಡಬೇಕು. ರಾಮಕೃಷ್ಣ ಮಠ ಮುಂದಕ್ಕೆ ಕ್ಲೀನ್ ಮಂಗಳೂರು, ಗ್ರೀನ್ ಮಂಗಳೂರು ಯೋಜನೆ ಹಮ್ಮಿಕೊಳ್ಳಲಿದೆ ಎಂದು ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದರು.
ಉರ್ವ ಚರ್ಚ್ ಧರ್ಮಗುರು ಸ್ಟಾನಿ ಡಿಸೋಜ ಮಾತನಾಡಿ, ಮಂಗಳೂರು ಧರ್ಮಪ್ರಾಂತದ ಎಲ್ಲ ಕ್ರೈಸ್ತ ಮನೆಗಳಲ್ಲಿ ಒಂದೊಂದು ಗಿಡ ನೆಡುವಂತೆ ಮಂಗಳೂರು ಬಿಷಪರು ಸೂಚನೆ ನೀಡಿದ್ದಾರೆ. ಚರ್ಚ್ ಆವರಣದಲ್ಲೂ ಗಿಡ ನೆಡಲಾಗುತ್ತಿದೆ. ಪರಿಸರದ ಸಮತೋಲನ ತಪ್ಪಿಸರುವು ಈ ವರ್ಷ ಸ್ಪಷ್ಟವಾಗಿ ಗೋಚರಿಸಿದೆ. ಪರಿಸರ ರಕ್ಷಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಲೋಕೇಶ್ ಪುತ್ರನ್ ಮಾತನಾಡಿ ಟ್ರಸ್ಟ್ ವತಿಯಿಂದ ಪ್ರಥಮ ಹಂತದಲ್ಲಿ ಮಣ್ಣಗುಡ್ಡ ಶಾಲೆ-ಲೇಡಿಹಿಲ್ ವೃತ್ತ, ಲೇಡಿಹಿಲ್ ವೃತ್ತ- ಉರ್ವ ಮಾರ್ಕೆಟ್-ಕೊರಗಜ್ಜನ ಗುಡಿ ತನಕ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ನಗರದ ಸೌಂದರ್ಯ ವೃದ್ಧಿಗಾಗಿ ಹೂವಿನ ಗಿಡ ನೆಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಲ್.ಎಸ್.ಲಿಂಗೇಗೌಡ, ಡಿಪಿಎಸ್‌ಪಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್, ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ಸನಾತನ ನಾಟ್ಯಾಲಯ ಚಂದ್ರಶೇಖರ ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಪಾಲಿಕೆ ಮಾಜಿ ಸದಸ್ಯರಾದ ಜಯಂತಿ ಆಚಾರ್, ಲತಾ ಕೆ.ಸಾಲಿಯಾನ್, ಟ್ರಸ್ಟ್‌ನ ನೀತಾ ಪುತ್ರನ್ ಉಪಸ್ಥಿತರಿದ್ದರು.