×
Ad

ಹಳೆಕೋಟೆ ನುಸ್ರತುಲ್ ಮಸಾಕೀನ್‌ನಿಂದ ಸೌಹಾರ್ದ ಇಫ್ತಾರ್ ಕೂಟ

Update: 2019-06-02 18:13 IST

ಉಳ್ಳಾಲ, ಜೂ.2: ಸೌಹಾರ್ದ ಇಫ್ತಾರ್ ಕೂಟ ಅಯೋಜಿಸುವ ಮೂಲಕ ಉಳ್ಳಾಲ ಭಾಗದಲ್ಲಿ ಧರ್ಮಗಳ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಲು ಸಾಧ್ಯವಿದೆ. ಇಂತಹ ಕಾರ್ಯಕ್ರಮ ನಡೆಸುತ್ತಿರುವ ಸಂಘಟಕರ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅಳೇಕಲ ನುಸ್ರತುಲ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪೊಸಕುರಲ್ ಬಳಗದ ಸಹಕಾರದಿಂದ ಹಳೆಕೋಟೆ ಹಝ್ರತ್ ಸೈಯದ್ ಮದನಿ ಶಾಲೆಯಲ್ಲಿ ಶನಿವಾರ ನಡೆದ ಆರನೇ ವರ್ಷದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಫಾ.ಡಾ.ಜೆ.ಬಿ.ಸಲ್ದಾನ ಮಾತನಾಡಿ ಅಮೆರಿಕಾದಲ್ಲಿ ಚರ್ಚೊಂದು ಪ್ರತಿ ಶುಕ್ರವಾರ ಮಸೀದಿಯಾಗಿ ಮಾರ್ಪಾಡುತ್ತದೆ. ಇದು ಪ್ರಸ್ತುತ ದಿನಗಳಲ್ಲಿ ಮಾನವರು ಸೌಹಾರ್ದತ್ತ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ. ಎಲ್ಲಾ ಧರ್ಮೀಯರು ಪವಿತ್ರ ಯಾತ್ರೆ ಕೈಗೊಳ್ಳಲು ಹಾತೊರೆಯುತ್ತಾರೆ. ಆದರೆ ಪರರ ಸೇವೆ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಬಂದಾಗ ಸೌಹಾರ್ದಕ್ಕೆ ಎಂದಿಗೂ ಧಕ್ಕೆ ಬಾರದು ಎಂದರು.

ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸರ್ವ ಧರ್ಮೀಯರನ್ನು ಇಫ್ತಾರ್‌ಗೆ ಕರೆಯುವ ಉದ್ದೇಶ ಪರಿಸರದಲ್ಲಿ ಬರುವ ಕೆಡುಕುಗಳನ್ನು ತಡೆಯಲು ಮತ್ತು ಊರಿನಲ್ಲಿ ಶಾಂತಿ, ಸೌಹಾರ್ದಕ್ಕೆ ಭದ್ರ ಬುನಾದಿ ಹಾಕುವ ಪ್ರಯತ್ನವಾಗಿದೆ. ಉಳ್ಳಾಲದಲ್ಲಿ ಮುಂದೆಂದಿಗೂ ಶಾಂತಿ ಕದಡುವುದಕ್ಕೆ ಅವಕಾಶ ನೀಡಬಾರದು ಎಂದರು.

ದೇರಳಕಟ್ಟೆ ಶ್ರೀ ಅಯ್ಯಪ್ಪದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಅಡ್ಯಂತಾಯ, ಹಳೆಕೋಟೆ ಮಸ್ಜಿದುಲ್ ಕರೀಂ ಖತೀಬ್ ಉಸ್ಮಾನ್ ಸಅದಿ, ನಗರಸಭೆಯ ಮಾಜಿ ಸದಸ್ಯ ಫಾರೂಕ್ ಯು.ಎಚ್., ಸಲಾಂ ಮದನಿ ಉಸ್ತಾದ್, ಜಮಾಅತ್ ಸದಸ್ಯ ಅಲಿಮೋನು ಉಪಸ್ಥಿತರಿದ್ದರು.

ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹ ಸ್ವಾಗತಿಸಿದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News