ಸುಷ್ಮಾ ಸ್ವರಾಜ್ ರನ್ನು ಅನುಸರಿಸುವ ಸುಳಿವು ನೀಡಿದ ನೂತನ ವಿದೇಶಾಂಗ ಸಚಿವ

Update: 2019-06-02 15:09 GMT

ಹೊಸದಿಲ್ಲಿ,ಜೂ.2: ನೂತನ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಿಗೇ ವಿದೇಶಗಳಲ್ಲಿರುವ ಭಾರತೀಯರೊಂದಿಗೆ ಟ್ವಿಟರ್‌ನಲ್ಲಿ ತೊಡಗಿಸಿಕೊಂಡಿದ್ದು,ನೆರವು ಕೋರಿ ಅವರು ಮಾಡಿರುವ ಟ್ವೀಟ್‌ಗಳಿಗೆ ಉತ್ತರಿಸುವ ಮೂಲಕ ತನ್ನ ಪೂರ್ವಾಧಿಕಾರಿ ಸುಷ್ಮಾ ಸ್ವರಾಜ್ ಅವರ ಮಾದರಿಯನ್ನು ಅನುಸರಿಸುವ ಸುಳಿವು ನೀಡಿದ್ದಾರೆ.

ಸೌದಿ ಅರೇಬಿಯಾದಲ್ಲಿರುವ ಕೋಲ್ಕತಾ ಮೂಲದ ಸುಹೈಲ್ ಎನ್ನುವವರು ನೆರವು ಕೋರಿ ಮಾಡಿದ್ದ ಟ್ವೀಟ್‌ಗೆ ಭಾರತೀಯ ರಾಯಭಾರಿ ಕಚೇರಿಯು ಚುರುಕಾಗಿ ಪ್ರತಿಕ್ರಿಯಿಸಿರುವುದನ್ನು ಟ್ವೀಟೊಂದರಲ್ಲಿ ಪ್ರಶಂಸಿಸಿರುವ ಜೈಶಂಕರ್,ಮುಂದಿನ ಬೆಳವಣಿಗೆಯ ಕುರಿತು ತನಗೆ ಮಾಹಿತಿ ನೀಡುತ್ತಿರುವಂತೆ ಸೂಚಿಸಿದ್ದಾರೆ.

ಹಿಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ವಿದೇಶಗಳಲ್ಲಿರುವ ಭಾರತೀಯರ ನೆರವಿಗೆ ತಕ್ಷಣ ಧಾವಿಸುವ ಮೂಲಕ ವ್ಯಾಪಕ ಪ್ರಶಂಸೆಗೊಳಗಾಗಿದ್ದರು. ಆರೋಗ್ಯ ಕಾರಣಗಳಿಂದಾಗಿ ಅವರು ಈ ಬಾರಿ ಲೋಕಸಭಾ ಚುನಾವಣೆಗಳಿಗೆ ಸ್ಪರ್ಧಿಸಿರಲಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಲಿಬಿಯಾ ಮತ್ತು ಯೆಮೆನ್‌ಗಳಲ್ಲಿದ್ದವರು ಸೇರಿದಂತೆ ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯರ ರಕ್ಷಣಾ ಕಾರ್ಯಾಚರಣೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿದೇಶಗಳಲ್ಲಿರುವ ಭಾರತೀಯರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರು ಖ್ಯಾತರಾಗಿದ್ದರು.

ನಿಜವಾದ ಅಗತ್ಯವಿರುವ ಸಂದರ್ಭದಲ್ಲಿ ಭಾರತೀಯರು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಭಾರತೀಯ ರಾಯಭಾರಿ ಕಚೇರಿಯು ಅವರನ್ನು ರಕ್ಷಿಸುತ್ತದೆ ಎಂದು ಸುಷ್ಮಾ ಟ್ವಿಟರ್ ಬಳಕೆದಾರನೋರ್ವನಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News