ಶುಲ್ಕ ಪಾವತಿಸದ ಬಡ ವಿದ್ಯಾರ್ಥಿಗಳಿಗೆ ಟಿಸಿ ನೀಡದ ಖಾಸಗಿ ಶಾಲೆ

Update: 2019-06-02 15:49 GMT

  ಹೊಸದಿಲ್ಲಿ, ಜೂ. 2: ಕುಟುಂಬದ ಆರ್ಥಿಕ ಮುಗ್ಗಟ್ಟಿನಿಂದ ಶುಲ್ಕ ಪಾವತಿಸಲು ಸಾಧ್ಯವಾಗದೆ, ಇನ್ನೊಂದು ಶಾಲೆಗೆ ವರ್ಗಾವಣೆಯಾಗಲು ಬಯಸಿದ ಇಬ್ಬರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡದ ಖಾಸಗಿ ಅನುದಾನ ರಹಿತ ಶಾಲೆಯ ನಿರ್ಧಾರದ ಕುರಿತ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಆರಂಭಿಸಿದೆ.

 ಶಾಲೆಯಿಂದ ವರ್ಗಾವಣೆ ಪತ್ರ ನೀಡುತ್ತಿಲ್ಲ ಎಂದು ತಮ್ಮ ಸಂಕಷ್ಟ ತೋಡಿಕೊಂಡು 5 ಹಾಗೂ 9 ವರ್ಷ ವಯಸ್ಸಿನ ಸಹೋದರರು ನ್ಯಾಯಾಲಯಕ್ಕೆ ಪತ್ರ ಬರೆದಿದ್ದರು. ನ್ಯಾಯಾಲಯ ಈ ಪತ್ರ ಸ್ವೀಕರಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ದಿಲ್ಲಿ ಸರಕಾರ ಹಾಗೂ ಶಾಲೆಯ ಪ್ರತಿಕ್ರಿಯೆ ಕೋರಿ ನೋಟಿಸು ಜಾರಿ ಮಾಡಿದೆ.

ಕೂಲಿ ಕಾರ್ಮಿಕರ ಮಕ್ಕಳಾದ ಈ ಇಬ್ಬರು ವಿದ್ಯಾರ್ಥಿಗಳು ವಕೀಲರ ಮೂಲಕ ಕಳುಹಿಸಿದ ಪತ್ರದಲ್ಲಿ, ‘‘ಈ ಶಾಲೆಯಲ್ಲಿ ಶಿಕ್ಷಣದ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಹೆತ್ತವರು ಬೇರೆ ಶಾಲೆಗೆ ನಮ್ಮನ್ನು ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭಾಕಿ ಇರುವ ಶುಲ್ಕ ಪಾವತಿಸದೆ ವರ್ಗಾವಣೆ ಪತ್ರ ನೀಡಲು ಸಾಧ್ಯವಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ಹೇಳುತ್ತಿದೆ’’ ಎಂದು ತಿಳಿಸಲಾಗಿದೆ.

ಪ್ರಮಾಣ ಪತ್ರವಿಲ್ಲದೆ ಇನ್ನೊಂದು ಶಾಲೆಗೆ ಸೇರಲು ಸಾಧ್ಯವಿಲ್ಲ. ಆದುದರಿಂದ ನ್ಯಾಯಾಲಯದ ಮಧ್ಯ ಪ್ರವೇಶ ಕೋರುತ್ತಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಉಚ್ಚ ನ್ಯಾಯಾಲಯದ ಸಾರ್ವಜನಿಕ ಹಿತಾಸಕ್ತಿ ದಾವೆ ಸಮಿತಿ ಈ ಪತ್ರವನ್ನು ಮೇಯಲ್ಲಿ ಸ್ವೀಕರಿಸಿತ್ತು ಹಾಗೂ ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ದಾವೆಯಾಗಿ ಪರಿಗಣಿಸಿ ವಿಚಾರಣೆ ನಡೆಸು ನಿರ್ಧರಿಸಿತ್ತು.

ಜುಲೈ 2ರಂದು ವಿಚಾರಣೆ ನಡೆಯಲಿರುವ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ವಕೀಲ ಅಶೋಕ್ ಅಗರ್‌ವಾಲ್ ಅವರನ್ನು ನ್ಯಾಯಾಲಯ ಆ್ಯಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News