ಮಂಗಳೂರು: ಜೂ.4ರಿಂದ ನೀರು ಪೂರೈಕೆ ಸ್ಥಗಿತ
Update: 2019-06-02 21:30 IST
ಮಂಗಳೂರು, ಜೂ. 2: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ರೇಶನಿಂಗ್ ವ್ಯವಸ್ಥೆಯಲ್ಲಿ ನಿಯಮವನ್ನು ಪರಿಷ್ಕರಿಸಿರುವ ಪ್ರಕಾರ ಜೂ. 3ರಂದು ನಗರಕ್ಕೆ ದಿನಪೂರ್ತಿ ನೀರು ಸರಬರಾಜು ಆಗಲಿದ್ದು, ಜೂ.4ರ ಬೆಳಗ್ಗೆ 6ರಿಂದ ನಾಲ್ಕು ದಿನ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಆನಂತರದ 4 ದಿನ ನೀರು ಪೂರೈಕೆ ಇರಲಿದೆ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಎಪ್ರಿಲ್ ಕೊನೆಯ ವಾರದಿಂದ ನೀರಿನ ಸಮಸ್ಯೆ ಕಂಡು ಬಂದಿದೆ. ಮುಂಗಾರು ಆರಂಭಕ್ಕೆ ಇನ್ನೂ ಕೆಲವು ದಿನಗಳಾಗಬಹುದು. ಹವಾಮಾನ ಇಲಾಖೆಯ ಪ್ರಕಾರ ಜೂ.6ರಿಂದ ಮುಂಗಾರು ಪ್ರವೇಶವಾಗಲಿದೆ. ಆದರೆ ಕೆಲ ದಿನಗಳು ವ್ಯತ್ಯಾಸವಾಗಬಹುದು. ಒಂದು ವೇಳೆ ಮುಂಗಾರು ವಿಳಂಬವಾಗಿ ತುಂಬೆ ಅಣೆಕಟ್ಟು ಸಂಪೂರ್ಣ ಬರಿದಾದರೂ ಕೂಡ ತೆರೆದ ಬಾವಿಗಳು, ಬೋರ್‌ವೆಲ್‌ಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.