ಅಸ್ಸಾಂ ಪೌರತ್ವ ಪಟ್ಟಿ: ದೂರು ಇತ್ಯರ್ಥಕ್ಕೆ 1000 ನ್ಯಾಯಾಧಿಕರಣ ಸ್ಥಾಪನೆಗೆ ನಿರ್ಧಾರ

Update: 2019-06-02 17:18 GMT

ಹೊಸದಿಲ್ಲಿ, ಜೂ.2: ಅಸ್ಸಾಂನಲ್ಲಿ ಪೌರತ್ವ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದ ಬಗ್ಗೆ ದೂರುಗಳನ್ನು ಇತ್ಯರ್ಥಗೊಳಿಸಲು ಅನುಕೂಲವಾಗುವಂತೆ ಅಸ್ಸಾಂನಲ್ಲಿ 1000 ವಿದೇಶಿಯರ ನ್ಯಾಯಾಧಿಕರಣವನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯನ್ನು ಜುಲೈ 31ರ ಒಳಗೆ ಪ್ರಕಟಿಸಲಾಗುವುದು. ಎನ್‌ಆರ್‌ಸಿಯಲ್ಲಿ ಹೆಸರು ಬಿಟ್ಟು ಹೋಗಿರುವ ಪೌರರು ರಾಜ್ಯಾದ್ಯಂತ ಸ್ಥಾಪನೆಯಾಗುವ ವಿದೇಶಿಯರ ನ್ಯಾಯಾಧಿಕರಣವನ್ನು ಸಂಪರ್ಕಿಸಿ ತಮ್ಮ ಅಹವಾಲನ್ನು ಮಂಡಿಸಬಹುದು. ರಾಜ್ಯದಲ್ಲಿ 1000 ಹೆಚ್ಚುವರಿ ನ್ಯಾಯಾಧಿಕರಣ ಸ್ಥಾಪಿಸುವ ಮತ್ತು ವಿದೇಶಿಯರ ಇ- ನ್ಯಾಯಾಧಿಕರಣ ಸ್ಥಾಪನೆಯ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯದ ಕಾರ್ಯದರ್ಶಿ (ಗಡಿ ನಿರ್ವಹಣೆ) ಆರ್‌ಬಿ ಶರ್ಮ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಲಾಗಿತ್ತು.

ಅಲ್ಲದೆ ಅಕ್ರಮ ವಲಸಿಗರೆಂದು ಘೋಷಿಸಲ್ಪಟ್ಟಿರುವ ಜನರ ಅಹವಾಲಿನ ಬಗ್ಗೆ ಗಮನ ಹರಿಸಲು ವಿದೇಶಿಯರ ಇ- ನ್ಯಾಯಾಧಿಕರಣ ಸ್ಥಾಪನೆಗೆ ರಾಜ್ಯ ಸರಕಾರಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ಜುಲೈ 31ರಂದು ಎನ್‌ಆರ್‌ಸಿಯ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ನ್ಯಾಯಾಧಿಕರಣದ ಅಗತ್ಯವಿರುತ್ತದೆ. ನ್ಯಾಯಾಧಿಕರಣಗಳನ್ನು ಆರಂಭಿಸಲು ಗೃಹ ಸಚಿವಾಲಯ ಅಸ್ಸಾಂ ಸರಕಾರಕ್ಕೆ ನೆರವಾಗಲಿದೆ. ಇದೀಗ ಈ 1000 ನ್ಯಾಯಾಧಿಕರಣದ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಬೇಕಿದ್ದು ಇವರನ್ನು ಗುರುತಿಸಲು ರಾಜ್ಯ ಸರಕಾರ, ಕೇಂದ್ರ ಗೃಹ ಇಲಾಖೆ ಹಾಗೂ ಇತರ ಇಲಾಖೆಗಳು ಯೋಜನೆಯನ್ನು ರೂಪಿಸಿದೆ. ವಿದೇಶಿಯರ ನ್ಯಾಯಾಧಿಕರಣಕ್ಕೆ ನ್ಯಾಯಾಂಗ ಅಧಿಕಾರಿಗಳ ಸಹಿತ ಸುಮಾರು 12 ಸಾವಿರ ಸಿಬ್ಬಂದಿಗಳ ಅಗತ್ಯವಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 100 ನ್ಯಾಯಾಧಿಕರಣಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ 1000 ನ್ಯಾಯಾಧಿಕರಣಗಳು ದೂರಿನ ತ್ವರಿತ ಇತ್ಯರ್ಥಕ್ಕೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಆರ್‌ಸಿ ಕರಡು ಪಟ್ಟಿಯಿಂದ ಹೊರಬಿದ್ದಿರುವ 40.7 ಲಕ್ಷ ಜನರಲ್ಲಿ ಸುಮಾರು 30 ಲಕ್ಷ ಜನತೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಬದಲು ಇತರ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಸುಮಾರು 600 ಆಕ್ಷೇಪಣೆಗಳು ಸಲ್ಲಿಸಲ್ಪಟ್ಟಿವೆ. ಕರಡು ಪಟ್ಟಿಯಲ್ಲಿ ಹೆಸರು ನಮೂದಿತವಾಗದ 40.7 ಲಕ್ಷ ಜನರಲ್ಲಿ 37.59 ಲಕ್ಷ ಜನರ ಹೆಸರನ್ನು ತಿರಸ್ಕರಿಸಲಾಗಿದ್ದು 2,48,077 ಜನರ ಹೆಸರನ್ನು ಈಗ ಮರು ಸೇರ್ಪಡೆಗೆ ಪರಿಶೀಲಿಸಲಾಗುವುದು. ಇವರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ಒದಗಿಸಲಾಗುತ್ತದೆ. ಇವರು ಮತ್ತೆ ಹೊಸದಾಗಿ ದಾಖಲೆಪತ್ರಗಳನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಸ್ಸಾಂನಲ್ಲಿ 1951ರಲ್ಲಿ ಪ್ರಥಮ ಬಾರಿಗೆ ಎನ್‌ಆರ್‌ಸಿಯನ್ನು ಸಿದ್ದಗೊಳಿಸಿದಾಗ ರಾಜ್ಯದಲ್ಲಿ 80 ಲಕ್ಷ ಪೌರರಿದ್ದರು. 2011ರ ಜನಗಣತಿಯ ಪ್ರಕಾರ ಅಸ್ಸಾಂನ ಒಟ್ಟು ಜನಸಂಖ್ಯೆ 3.11 ಕೋಟಿಗೂ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News