2007ರಲ್ಲಿ ಸಚಿನ್ ನಿವೃತ್ತಿ ಹೊಂದುವ ಯೋಚನೆ ಕೈಬಿಟ್ಟಿದ್ದು ಈ ಕಾರಣಕ್ಕಾಗಿ…

Update: 2019-06-03 12:01 GMT

ಹೊಸದಿಲ್ಲಿ, ಜೂ.3: ಕ್ರಿಕೆಟ್ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಜತೆ ತಾನು 45 ನಿಮಿಷಗಳ ಕಾಲ ನಡೆಸಿದ ದೂರವಾಣಿ ಸಂಭಾಷಣೆಯೊಂದರ ವೇಳೆ ಅವರು 2007ರಲ್ಲಿ ಕ್ರಿಕೆಟ್ ಜೀವನದಿಂದ ನಿವೃತ್ತಿ ಪಡೆಯದಂತೆ ಮನವೊಲಿಸಿದ್ದರೆಂಬ ವಿಚಾರವನ್ನು ಸಚಿನ್ ತೆಂಡುಲ್ಕರ್ ನೆನಪಿಸಿಕೊಂಡಿದ್ದಾರೆ.

ಆ ವರ್ಷ ನಡೆದಿದ್ದ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾದೆದುರು ಸೋಲಿನ ನಂತರ ಪಂದ್ಯಾವಳಿಯಿಂದ ಭಾರತ ಹೊರಬಿದ್ದು ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಸಾಕಷ್ಟು ಟೀಕೆ ಎದುರಿಸಿತ್ತು. ಸಚಿನ್ ಕೂಡ ಈ ಪಂದ್ಯಾವಳಿಯಲ್ಲಿನ ಮೂರು ಪಂದ್ಯಗಳಲ್ಲಿ ಕೇವಲ 64 ರನ್ ಗಳಿಸಿದ್ದರಲ್ಲದೆ ತಾವು ಕ್ರಿಕೆಟ್ ಜೀವನದಿಂದ ನಿವೃತ್ತರಾಗಲು ಇದು ಸಕಾಲ ಎಂದು ಅಂದುಕೊಂಡಿದ್ದರು.

“ನಮ್ಮಲ್ಲಿ ಹಲವಾರು ಬದಲಾವಣೆಗಳಾಗಬೇಕಿತ್ತು, ಆದು ಆಗದೇ ಇದ್ದರೆ ನಿವೃತ್ತನಾಗುತ್ತೇನೆ ಎಂದು ಶೇ 90ರಷ್ಟು ಅಂದುಕೊಂಡಿದ್ದೆ. ಆಗ ನನ್ನ ಸೋದರ ನನ್ನಲ್ಲಿ ಮಾತನಾಡಿ 2011ರಲ್ಲಿ ವಿಶ್ವ ಕಪ್ ಅಂತಿಮ ಪಂದ್ಯ ಮುಂಬೈಯಲ್ಲಿ ನಡೆಯಲಿದೆ. ಆ ಸುಂದರ ಟ್ರೋಫಿಯನ್ನು ನಿಮ್ಮ ಕೈಯ್ಯಲ್ಲಿ ಹಿಡಿಯುವ ಬಗ್ಗೆ ಊಹಿಸುತ್ತೀರಾ ಎಂದು ಕೇಳಿದ'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಲಂಡನ್ ನಲ್ಲಿ ಮಾತನಾಡಿದ ಸಚಿನ್ ಹೇಳಿದರು.

“ಆ ಘಟನೆಯ ನಂತರ ನಾನು ನಮ್ಮ ಫಾರ್ಮ್ ಹೌಸ್ ಗೆ ತೆರಳಿದ್ದೆ. ಆಗ ನನಗೆ ಸರ್ ವಿವಿಯನ್ ರಿಚರ್ಡ್ಸ್ ಅವರಿಂದ ಕರೆ ಬಂದು ನಿಮ್ಮಲ್ಲಿ ಇನ್ನೂ ಬಹಳಷ್ಟು ಕ್ರಿಕೆಟ್ ಬಾಕಿಯಿದೆಯೆಂದು ಗೊತ್ತು ಎಂದರು. ನಾವು 45 ನಿಮಿಷಗಳ ಕಾಲ ಮಾತನಾಡಿದೆವು. ನನ್ನ ಬ್ಯಾಟಿಂಗ್ ಹೀರೋ ನನ್ನ ಬಳಿ ಇಷ್ಟೊಂದು ಮಾತನಾಡಿದ್ದು ವಿಶೇಷ. ಆ ಕ್ಷಣ ನನ್ನಲ್ಲಿ ಬದಲಾವಣೆಯಾಯಿತು ಹಾಗೂ ಮುಂದೆ ನನ್ನ ನಿರ್ವಹಣೆ ಇನ್ನಷ್ಟು ಉತ್ತಮಗೊಂಡಿತು'' ಎಂದು ಸಚಿನ್ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News