×
Ad

ಹಿಂದಿ ಹೇರಿಕೆ; ಭಾಷೆ ಕಲಿಯುವುದಕ್ಕೆ ವಿರೋಧ ಸರಿಯಲ್ಲ: ಶೋಭಾ ಕರಂದ್ಲಾಜೆ

Update: 2019-06-03 18:40 IST

ಉಡುಪಿ, ಜೂ.3: ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಕಲಿಯುವುದಕ್ಕೆ ಯಾರು ಕೂಡ ಆಕ್ರೋಶ ವ್ಯಕ್ತಪಡಿಸುವ ಅಗತ್ಯ ಇಲ್ಲ. ಯಾವುದೇ ಭಾಷೆ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಬಾರದು. ನಾನು ಸಂಸದೆಯಾಗಿ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಬೇರೆ ಸಂಸದರಿಗೆ ಅರ್ಥ ಆಗುವುದಿಲ್ಲ. ಆದುದರಿಂದ ನಾವು ಎಲ್ಲ ಭಾಷೆಯನ್ನು ಕಲಿಯಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಹಿಂದಿ ಹೇರಿಕೆ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿ ಹೇರಿಕೆ ಬಗ್ಗೆ ಟೀಕಿಸುವ ಮೊದಲು ರಾಜ್ಯ ಸರಕಾರ ಕನ್ನಡವನ್ನು ಕಡ್ಡಾಯ ಮಾಡುವ ಕೆಲಸ ಮಾಡಲಿ. ಆ ಮೂಲಕ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಿ. ಉತ್ತಮ ಶಿಕ್ಷರನ್ನು ನೇಮಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಿ. ಕೇವಲ ಹಿಂದಿ ಹೇರಿಕೆ ಬಗ್ಗೆ ಟೀಕಿಸಿದರೆ ಕನ್ನಡ ಅಭಿವೃದ್ಧಿ ಆಗಲ್ಲ ಎಂದರು.

ಕಳೆದ ಬಾರಿ ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡದ ಬಗ್ಗೆ ವ್ಯಕ್ತವಾದ ಆಕ್ರೋಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೋಭಾ, ಸಂಸತ್ ಅಧಿವೇಶನ ಹೊರತು ಪಡಿಸಿ, ವಾರದಲ್ಲಿ ಒಂದು ದಿನ ಉಡುಪಿ ಮತ್ತು ಒಂದು ದಿನ ಚಿಕ್ಕಮಗಳೂರು ಜಿಲ್ಲೆಗೆ ಕಡ್ಡಾಯವಾಗಿ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಸಂಸದರ ಪೈಕಿ ನಾನು ತುಂಬಾ ಜೂನಿಯರ್. ಆ ರೀತಿಯ ದುರಾಸೆ ನನಗೆ ಇಲ್ಲ. ಇನ್ನು ಬೆಳೆಯಲು ನಮಗೆ ಅವಕಾಶ ಇದೆ. ರಾಜ್ಯದಲ್ಲಿ ಹಲವು ಹಿರಿಯ ಸಂಸದರಿಗೆ ಸಚಿವ ಸ್ಥಾನ ದೊರೆ ತಿರುವುದು ಖುಷಿಯಾಗಿದೆ ಎಂದು ಅವರು ಹೇಳಿದರು.

ಸುವರ್ಣ ತ್ರಿಭುಜ ಬೋಟು ನಾಪತ್ತೆಗೆ ಸಂಬಂಧಿಸಿ ಮೀನುಗಾರರ ಅಪೇಕ್ಷೆ ಯಂತೆ ನೌಕಪಡೆ ಜೊತೆ ಹುಡುಕಾಟ ಮಾಡಿ ಪತ್ತೆ ಹಚ್ಚಲಾಗಿದೆ. ಇನ್ನು ಪರಿಹಾರ ಒದಗಿಸುವ ಬಗ್ಗೆ ಸರಕಾರ ಬದಲಾವಣೆ ಆದ ಕಾರಣ ಮುಂದುವರೆ ಸಲು ಸಾಧ್ಯವಾಗಿಲ್ಲ. ಹೊಸ ಸರಕಾರದಿಂದ ಈ ಕುರಿತ ಸಮಸ್ಯೆ ಪರಿಹರಿ ಸಲು ಪ್ರಯತ್ನಿಸಲಾಗುವುದು ಎಂದರು.

ಸಿಎಂ ಗ್ರಾಮ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ವಾಸ್ತವ್ಯ ಮಾಡಿರುವ ಗ್ರಾಮಗಳ ಸ್ಥಿತಿ ಏನಾಗಿದೆ ಎಂಬುದನ್ನು ತಿರುಗಿ ನೋಡಲಿ. ಕೇವಲ ಗ್ರಾಮ ವಾಸ್ತವ್ಯದಿಂದ ಅಭಿವೃದ್ದಿ ಆಗಲ್ಲ. ಜನ ಅಧಿಕಾರ ನೀಡಿರುವುದು ವಿಧಾನಸೌಧದಲ್ಲಿ ಕುಳಿತುಕೊಂಡು ಕೆಲಸ ಮಾಡು ವುದಕ್ಕೆಯೇ ಹೊರತು ಕೇವಲ ಗ್ರಾಮ ವಾಸ್ತವ್ಯ ಮಾಡಲು ಅಲ್ಲ. ಕುಮಾರ ಸ್ವಾಮಿ ವಿಧಾನಸೌಧದ ಬದಲು ಪಂಚತಾರಾ ಹೊಟೇಲಿನಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಮಂಡ್ಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡಿತು. ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡಿ ರುವುದರಿಂದ ಅವರು ಬಿಜೆಪಿಗೆ ಬೆಂಬಲ ನೀಡಬೇಕೆಂಬ ಅಪೇಕ್ಷೆ ನಮ್ಮದಾಗಿದೆ. ಮಂಡ್ಯದಲ್ಲಿ ಬಿಜೆಪಿಯ 2.5ಲಕ್ಷ ಬೆಂಬಲಗರು ಸುಮಲತಾ ಅವರಿಗೆ ಮತ ಹಾಕಿದ್ದಾರೆ. ಆದುದರಿಂದ ಅವರು ನಮ್ಮ ಜೊತೆ ಸೇರಬೇಕು ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿದರು.

ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಮುಖ್ಯಮಂತ್ರಿ ಯಾಗಬೇಕೆಂಬ ಉದ್ದೇಶದಿಂದ ಸಿದ್ಧರಾಮಯ್ಯ ತಮ್ಮ ಪಕ್ಷದ ಶಾಸಕರನ್ನು ಎತ್ತಿ ಕಟ್ಟಿ ಸರಕಾರದೊಳಗೆ ಗೊಂದಲಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಹಾಗಾಗಿ ಈ ಸರಕಾರ ಬಹಳ ಕಾಲ ಮುಂದು ವರೆಯುವುದಿಲ್ಲ. ಇದೆಲ್ಲವೂ ಕಾಂಗ್ರೆಸ್ಸಿನ ಒಳ ಜಗಳ, ನಾಯಕರ ಅಧಿಪತ್ಯದ ಕಾರಣಕ್ಕೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಮುಂದಿನ ಎರಡು ಮೂರು ವರ್ಷಗಳಲ್ಲಿ ಕೊಂಕಣ ರೈಲ್ವೆಯನ್ನು ಡಬಲ್ ಟ್ರಾಕ್ ಹಾಗೂ ವಿದ್ಯುತೀಕರಣ ಪೂರ್ಣಗೊಳಿಸಲು ಪ್ರಯತ್ನಿ ಸಲಾಗುವುದು. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ, ಸಿಆರ್‌ಝೆಡ್ 50 ಮೀಟರ್ ವ್ಯಾಪ್ತಿಗೆ ಇಳಿಕೆ, ಚಿಕ್ಕಮಗಳೂರು ಹೊಸ ರೈಲು ಮಾರ್ಗಕ್ಕೆ ಡಿಪಿಆರ್‌ಗೆ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಪ್ರಭಾಕರ ಪೂಜಾರಿ, ಗೀತಾಂಜಲಿ ಸುವರ್ಣ, ಪ್ರವೀಣ್ ಕುಮಾರ್ ಶೆಟ್ಟಿ, ಕುಲ್ಯಾಡಿ ಸುರೇಶ್ ನಾಯಕ್, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News