×
Ad

ಕುವೈತ್‌ನಲ್ಲಿ 74 ಮಂದಿ ಅತಂತ್ರ: ಸ್ವದೇಶಕ್ಕೆ ಮರಳುವ ಸಾಧ್ಯತೆ ಮತ್ತೆ ವಿಳಂಬ

Update: 2019-06-03 20:29 IST

ಮಂಗಳೂರು, ಜೂ. 3: ಉದ್ಯೋಗಕ್ಕಾಗಿ ಕುವೈತ್‌ಗೆ ತೆರಳಿ ಅತಂತ್ರರಾಗಿರುವ 74 ಮಂದಿ ಭಾರತೀಯರ ಬಿಡುಗಡೆಗೆ ಸಂಬಂಧಿಸಿದಂತೆ ಸೋಮವಾರ ನಡೆಯಬೇಕಿದ್ದ ಶೋನ್‌ನ ನಿರ್ಣಾಯಕ ಸಭೆ ಕೊನೆ ಗಳಿಗೆಯಲ್ಲಿ ರದ್ದುಗೊಂಡಿದೆ. ಇದರಿಂದಾಗಿ ಮಂಗಳೂರಿನ 35 ಮಂದಿ ಸೇರಿದಂತೆ ಭಾರತೀಯರು ಸ್ವದೇಶಕ್ಕೆ ವಾಪಸಾಗುವ ಸಾಧ್ಯತೆ ಮತ್ತೆ ವಿಳಂಬವಾಗಲಿದೆ.

ಕುವೈತ್‌ನಲ್ಲಿರುವ ಸರಕಾರಿ ಸ್ವಾಮ್ಯದ ನ್ಯಾಯಾಲಯ ಮಾದರಿ ಸಂಸ್ಥೆ (ಶೋನ್)ನಲ್ಲಿ ರವಿವಾರ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕುವೈತ್‌ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉಪ ಕಾರ್ಯದರ್ಶಿ ಶಿಬಿ ಯು.ಎಸ್., ಶೋನ್, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್ (ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಂಟ್ರಾಕ್ಟಿಂಗ್ ಕಂಪೆನಿ ಪ್ರತಿನಿಧಿಗಳು ಹಾಗೂ ಸಂತ್ರಸ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಆದರೆ ಎಲ್ಲ ಸಂತ್ರಸ್ತರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಅಂತಿಮ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಸೋಮವಾರ ರಮಝಾನ್ ಹಬ್ಬದ ಸಿದ್ಧತೆ ಹಿನ್ನೆಲೆಯಲ್ಲಿ ಉದ್ಯೋಗ ನೀಡಿದ ಇನೆಸ್ಕೋ ಜನರಲ್ ಟ್ರೇಡಿಂಗ್ ಕಂಪೆನಿ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ ಸಭೆಗೆ ಹಾಜರಾಗಲು ಅನಾನುಕೂಲತೆಯನ್ನು ತಿಳಿಸಿತ್ತು. ಇದರಿಂದಾಗಿ ಮಧ್ಯಾಹ್ನ ನಿಗದಿಯಾಗಿದ್ದ ಸಭೆಯನ್ನು ಮತ್ತೆ ಮುಂದೂಡಲಾಯಿತು. ಈ ಸಭೆ ಜೂ.9 ಅಥವಾ 10ರಂದು ನಡೆಯುವ ಸಂಭವ ಇದೆ ಎಂದು ಕುವೈಟ್‌ನ ಅನಿವಾಸಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಭಾರತೀಯ ರಾಯಭಾರ ಕಚೇರಿಯ ಸೂಚನೆ ಮೇರೆಗೆ ಎಲ್ಲ ಸಂತ್ರಸ್ತ ಭಾರತೀಯ ಉದ್ಯೋಗಿಗಳು ಕಂಪೆನಿಯ ಸೊತ್ತುಗಳನ್ನು ಮರಳಿಸಿದ್ದಾರೆ. ಇದನ್ನು ದೂರವಾಣಿ ಮೂಲಕ ಕಂಪೆನಿಯು ರಾಯಭಾರ ಅಧಿಕಾರಿಗಳಿಗೆ ಖಚಿತಪಡಿಸಿದೆ. ಆದರೆ ಸೊತ್ತು ಮರಳಿಸಿದ ಬಗ್ಗೆ ನಿರಕ್ಷೇಪಣಾ ಪತ್ರವನ್ನು ಕಂಪೆನಿ ಇನ್ನೂ ಸಂತ್ರಸ್ತ ನೌಕರರಿಗೆ ನೀಡಿಲ್ಲ.

ಕಂಪೆನಿ ನೀಡಿದ ವಾಗ್ದಾನದಂತೆ ಒಟ್ಟು 100 ದಿನಾರ್(1 ದಿರಾಮ್-228 ರೂ.) ಪೈಕಿ 38 ದಿನಾರ್‌ನ್ನು (8,664 ರೂ.)ಸಂತ್ರಸ್ತ ನೌಕರರಿಗೆ ಈಗಾಗಲೇ ನೀಡಿದೆ. ಉಳಿದ ಮೊತ್ತವನ್ನು ಬಿಡುಗಡೆ ಸಂದರ್ಭ ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೆ, ನೌಕರರ ವೀಸಾವನ್ನು ರದ್ದುಗೊಳಿಸಿ, ಮೂಲ ಪಾಸ್‌ಪೋರ್ಟ್ ಹಸ್ತಾಂತರಿಸಲು ಬಾಕಿ ಉಳಿದಿದೆ.

ಯಾವುದಕ್ಕೂ ರಮಝಾನ್ ಹಬ್ಬ ಮುಕ್ತಾಯದ ಬಳಿಕವೇ ಮಾತುಕತೆ ಮುಂದುವರಿಸುವುದಾಗಿ ಕಂಪೆನಿ ಈಗ ರಾಯಭಾರ ಕಚೇರಿಗೆ ತಿಳಿಸಿದೆ. ಇದರಿಂದಾಗಿ ಅನಿವಾರ್ಯವಾಗಿ ಮತ್ತೆ ಸಂತ್ರಸ್ತ ನೌಕರರು ಇನ್ನಷ್ಟು ದಿನ ಬಿಡುಗಡೆಗೆ ಕಾಯುವಂತಾಗಿದೆ.

ಈ ಮಧ್ಯೆ ಕುವೈತ್-ಮಂಗಳೂರು, ಕೊಚ್ಚಿನ್ ಮಾರ್ಗದಲ್ಲಿ ವಿಮಾನ ಸಂಚಾರ ತುಂಬಾ ದುಬಾರಿಯಾಗಿದೆ. ಟಿಕೆಟ್ ಪ್ರಯಾಣ ದರ ಕೂಡ 150 ದಿನಾರ್‌ವರೆಗೆ ತಲುಪಿದೆ. ಸಂತ್ರಸ್ತರು ಬಿಡುಗಡೆಗೊಳ್ಳುವ ವರೆಗೆ ಅವರ ದೈನಂದಿನ ಊಟೋಪಚಾರದ ವೆಚ್ಚವನ್ನು ಅನಿವಾಸಿ ಭಾರತೀಯ ಉದ್ಯಮಿಗಳು ಭರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News