ಜೂ.8-9: ಪಿಲಿಕುಳದಲ್ಲಿ ಹಣ್ಣುಗಳ ಉತ್ಸವ
ಮಂಗಳೂರು, ಜೂ.3: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಜೂ.8 ಮತ್ತು 9ರಂದು ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’ವನ್ನು ದ.ಕ.ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದೆ.
ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರೆ ಕಡೆಯ ಮೌಲ್ಯವರ್ಧಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ವಿವಿಧ ಹಣ್ಣುಗಳು, ಔಷಧೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಮಂಜಿಷ್ಟ, ದಾಳಿಂಬೆ ಸಿಪ್ಪೆ, ಅಳಲೆಕಾಯಿ, ನೀಲಿ, ಕಸಿನ್‌ಕಾರಿ ಮತ್ತು ಅಡಿಕೆ ಚೊಗರು ಮುಂತಾದ ಸಹಜ ಬಣ್ಣದಿಂದ ಸಂಸ್ಕೃರಿಸಲ್ಪಟ್ಟ ಕೈಮಗ್ಗಗಳ ವಸ್ತ್ರಗಳು, ಉಡುಪಿ ಸೀರೆಗಳು ಸಾವಯವ ಬಳಗದ ವಿವಿಧ ಆಹಾರ ಮತ್ತಿತ್ತರ ಪದಾರ್ಥಗಳು ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹಣ್ಣುಗಳಿಂದ ತಯಾರಿಸಲ್ಪಡುವ ವಿವಿಧ ಖಾದ್ಯಗಳು ಹಾಗೂ ಪಾನೀಯಗಳನ್ನು ಕೂಡಾ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಎರಡು ದಿನಗಳಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮೌಲ್ಯವರ್ಧಿತ ಮೀನು ಮತ್ತು ಮೀನಿನ ಖಾದ್ಯಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.