ತ್ರಿವಳಿ ತಲಾಕ್ ನಿಷೇಧ ಮಸೂದೆ ವಾಪಸ್ ತರಲಾಗುವುದು: ರವಿಶಂಕರ್ ಪ್ರಸಾದ್
ಹೊಸದಿಲ್ಲಿ, ಜೂ.3: ತ್ರಿವಳಿ ತಲಾಕನ್ನು ನಿಷೇಧಿಸುವ ಮಸೂದೆಯನ್ನು ಸರಕಾರ ಮತ್ತೊಮ್ಮೆ ಸಂಸತ್ ನಲ್ಲಿ ಮಂಡಿಸಲಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ತಿಳಿಸಿದ್ದಾರೆ.
16ನೇ ಲೋಕಸಭೆ ಕಳೆದ ತಿಂಗಳು ವಿಸರ್ಜನೆಯಾಗಿದ್ದು, ತ್ರಿವಳಿ ತಲಾಕ್ ನಿಷೇಧ ಮಸೂದೆ ಸಂಸತ್ ನಲ್ಲಿ ಅಂಗೀಕಾರ ಪಡೆಯದೆ ಇರುವುದರಿಂದ ಮತ್ತು ರಾಜ್ಯಸಭೆಯಲ್ಲಿ ಬಾಕಿಯುಳಿದಿರುವುದರಿಂದ ಅನೂರ್ಜಿತಗೊಂಡಿದೆ. ರಾಜ್ಯಸಭೆಯಲ್ಲಿ ಪರಿಚಯಗೊಂಡು ಅಲ್ಲಿ ಬಾಕಿಯುಳಿದಿರುವ ಮಸೂದೆಗಳು ಲೋಕಸಭೆಯ ವಿಸರ್ಜನೆಯಿಂದ ಅನೂರ್ಜಿತಗೊಳ್ಳುವುದಿಲ್ಲ. ಆದರೆ ಲೋಕಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆಗಳು ರಾಜ್ಯಸಭೆಯಲ್ಲಿ ಬಾಕಿಯುಳಿದಿದ್ದರೆ ಅಂತಹ ಮಸೂದೆಗಳು ಅನೂರ್ಜಿತಗೊಳ್ಳುತ್ತವೆ.
ಸರಕಾರದ ಸದಸ್ಯಬಲ ಕಡಿಮೆಯಿರುವ ರಾಜ್ಯಸಭೆಯಲ್ಲಿ ವಿಪಕ್ಷಗಳು ತ್ರಿವಳಿ ತಲಾಕ್ ಮಸೂದೆಯ ನಿಬಂಧನೆಗಳನ್ನು ವಿರೋಧಿಸುತ್ತಲೇ ಬಂದಿವೆ. ಈ ಮಸೂದೆಯನ್ನು ಮರುಪರಿಚಯಿಸಲಾಗುವುದೇ ಎಂದು ಕೇಳಿದಾಗ, ಖಂಡಿತವಾಗಿಯೂ, ಇದು ನಮ್ಮ ಚುನಾವಣಾ ಪ್ರಣಾಳಿಕೆಯ ವಿಷಯವಾಗಿತ್ತು. ಹಾಗಾಗಿ ಖಂಡಿತವಾಗಿಯೂ ಮರುಪರಿಚಯಿಸುತ್ತೇವೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.