ಉಪ್ಪುಂದ ಸ್ವರ್ಣೋದ್ಯಮಿಗಳ ದರೋಡೆ ಪ್ರಕರಣ: ಐವರು ಆರೋಪಿಗಳು ದೋಷಿ
ಕುಂದಾಪುರ, ಜೂ.3: ನಾಲ್ಕೂವರೆ ವರ್ಷಗಳ ಹಿಂದೆ ಬೈಂದೂರು ಸಮೀಪದ ನಡೆದ ಸ್ವರ್ಣೋದ್ಯಮಿಗಳ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ದೋಷಿಗಳೆಂದು ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಜೂ.7ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.
ರವಿ ಜತ್ತನ್, ಶಿವಪ್ರಕಾಶ್, ಚಂದ್ರಹಾಸ, ಪ್ರದೀಪ್ ಪೂಜಾರಿ ಹಾಗೂ ದುರ್ಗಾಪ್ರಸಾದ್ ಎಂಬವರು ದೋಷಿಗಳಾಗಿದ್ದಾರೆ. 2014ರ ಅ.7ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸೋನರಕೇರಿ ಬಳಿಯ ಗದ್ದೆಯಲ್ಲಿ ಹೋಗುತ್ತಿದ್ದ ಉಪ್ಪುಂದದ ಚಿನ್ನದ ಅಂಗಡಿಯ ಮಾಲಕ ಸುಧೀಂದ್ರ ಶೇಟ್, ಅವರ ತಂದೆ ಗಣೇಶ್ ಶೇಟ್ ಹಾಗೂ ತಂಗಿಯನ್ನು ಅಡ್ಡಗಟ್ಟಿದ ಐವರು ದರೋಡೆಕೋರರು ಮುಖಕ್ಕೆ ಕಾರ ಪುಡಿ ಎರಚಿ ಚೂರಿಯಿಂದ ಇರಿದ್ದರು.
ಈ ವೇಳೆ ಬೊಬ್ಬೆ ಕೇಳಿ ಸ್ಥಳಕ್ಕೆ ಓಡಿ ಬಂದ ಸ್ಥಳೀಯ ನಿವಾಸಿ ಅನಿಲ್ ಶೇಟ್ ಎಂಬವರಿಗೂ ಆರೋಪಿಗಳು ಚೂರಿ ಇರಿದು, ಸುಮಾರು 12ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆಗೈದಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಬೈಂದೂರು ಸಿಪಿಐ ಸುದರ್ಶನ್ ನ್ಯಾಯಾ ಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಕುರಿತು 42 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಪ್ರಕಾಶ ಖಂಡೇರಿ ಆರೋಪಿಗಳನ್ನು ದೋಷಿ ಎಂಬುದಾಗಿ ತೀರ್ಪು ನೀಡಿದರು. ಅಭಿಯೋಜನೆ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.