ತಮಿಳುನಾಡು ಮತ್ತು ಹಿಂದಿ ವಿರೋಧಿ ಪ್ರತಿಭಟನೆ

Update: 2019-06-03 17:22 GMT

ಚೆನ್ನೈ, ಜೂ.3: ಹಿಂದಿ ಭಾಷೆಗೆ ದೇಶದ ಇತರ ಭಾಷೆಗಿಂತ ಹೆಚ್ಚಿನ ಪ್ರಾಧಾನ್ಯತೆ ನೀಡುವುದನ್ನು ಈ ಹಿಂದಿನಿಂದಲೂ ಉಗ್ರವಾಗಿ ವಿರೋಧಿಸುತ್ತಾ ಬಂದಿರುವ ರಾಜ್ಯವೆಂದರೆ ತಮಿಳುನಾಡು. 1937ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಹಿಂದಿ ವಿರೋಧಿ ಪ್ರತಿಭಟನೆ 1940ರವರೆಗೆ ಮುಂದುವರಿದಿತ್ತು. 1965ರಲ್ಲಿ ಮತ್ತೊಮ್ಮೆ ಈ ವಿಷಯದ ಬಗ್ಗೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

 ಇದೀಗ ಮತ್ತೊಮ್ಮೆ ಹಿಂದಿ ಹೇರಿಕೆ ಪ್ರಸ್ತಾವನೆಗೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಡಿಎಂಕೆ, ಎಡಪಕ್ಷಗಳು, ಕಮಲಹಾಸನ್ ಅವರ ‘ಮಕ್ಕಳ್ ನೀಧಿ ಮಯ್ಯಮ್ ಪಕ್ಷ ’ ಕರಡು ಶಿಕ್ಷಣ ನೀತಿಯ ವರದಿಯನ್ನು ವಿರೋಧಿಸಿವೆ. ಹೊಸ ನೀತಿ ಜಾರಿಗೊಂಡರೆ ರಾಜ್ಯವು ಅದನ್ನು ತಿರಸ್ಕರಿಸುತ್ತದೆ ಎಂದು ತಮಿಳುನಾಡಿನ ಪ್ರಾಥಮಿಕ ಶಿಕ್ಷಣ ಸಚಿವ ಎಕೆ ಸೆಂಗೊಟ್ಟೈಯನ್ ಹೇಳಿದ್ದಾರೆ.

 ತಮಿಳುನಾಡು ದ್ವಿಭಾಷಾ ಸೂತ್ರವನ್ನು ಮಾತ್ರ ಪಾಲಿಸುತ್ತದೆ. ಕೇವಲ ತಮಿಳು ಮತ್ತು ಇಂಗ್ಲಿಷ್ ಭಾಷೆ ಮಾತ್ರ ತಮಿಳುನಾಡಿನಲ್ಲಿ ಧೈರ್ಯವಾಗಿ ಮುಂದಡಿ ಇಡುತ್ತದೆ ಎಂದವರು ಹೇಳಿದ್ದಾರೆ. ‘‘ಶಾಲೆಯಲ್ಲಿ ತ್ರಿಭಾಷಾ ಸೂತ್ರ ಎಂದರೆ ಇದರ ಅರ್ಥ, ಅವರು ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿ ಮಾಡಲು ಬಯಸಿದ್ದಾರೆ ’’ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಮ್ ಸರಣಿ ಟ್ವೀಟ್ ಮಾಡಿದ್ದಾರೆ. ಆದರೆ ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ವರದಿಯನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿಲ್ಲ, ಬದಲು ಶಾಲೆಯಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯಲು ಪ್ರೋತ್ಸಾಹಿಸುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News