ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಜೂ.10ರಂದು ತೀರ್ಪು ಹೊರಬೀಳುವ ಸಾಧ್ಯತೆ

Update: 2019-06-03 17:56 GMT

ಪಠಾಣಕೋಟ್(ಪಂಜಾಬ್),ಜೂ.3: ಕಳೆದ ವರ್ಷ ದೇಶಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ್ದ ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದಿದ್ದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪನ್ನು ಇಲ್ಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂ.10ರಂದು ಪ್ರಕಟಿಸುವ ಸಾಧ್ಯತೆಯಿದೆ.

ಆರೋಪಿಗಳ ಪರ ವಕೀಲರು ಸೋಮವಾರ ತಮ್ಮ ಅಂತಿಮ ವಾದಗಳನ್ನು ಪೂರ್ಣಗೊಳಿಸಿದ ಬಳಿಕ ನ್ಯಾ.ತೇಜ್‌ವಿಂದರ್ ಸಿಂಗ್ ಅವರು ತಾನು ತೀರ್ಪನ್ನು ಜೂ.10ರಂದು ಪ್ರಕಟಿಸಬಹುದು ಎಂದು ತಿಳಿಸಿದರು.

ಪೊಲೀಸರು ಕಥುವಾ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲು ವಕೀಲರು ತಡೆಯೊಡ್ಡಿದ ಬಳಿಕ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ ಹೊರಕ್ಕೆ ಸ್ಥಳಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಪಠಾಣಕೋಟ್ ನ್ಯಾಯಾಲಯವು ಕಳೆದ ವರ್ಷದ ಜೂನ್‌ನಲ್ಲಿ ವಿಚಾರಣೆಯನ್ನು ಆರಂಭಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಮುಖ್ಯಸ್ಥ ಸಾಂಜಿರಾಮ,ಆತನ ಪುತ್ರ ವಿಶಾಲ್,ಅಪ್ರಾಪ್ತ ವಯಸ್ಕ ಸೋದರಳಿಯ ಮತ್ತು ಆತನ ಸ್ನೇಹಿತ ಆನಂದ ದತ್ತಾ,ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ ಖಜುರಿಯಾ ಮತ್ತು ಸುರೇಂದ್ರ ವರ್ಮಾ ಮತ್ತಿತರರನ್ನು ಬಂಧಿಸಲಾಗಿತ್ತು.

ಬಾಲಕಿಯನ್ನು ಕಳೆದ ವರ್ಷದ ಜ.10ರಂದು ಅಪಹರಿಸಲಾಗಿತ್ತು. ಗ್ರಾಮದ ದೇವಸ್ಥಾನದಲ್ಲಿ ಆಕೆಯನ್ನು ಅಕ್ರಮ ಬಂಧನದಲ್ಲಿರಿಸಿ,ನಾಲ್ಕು ದಿನಗಳ ಕಾಲ ಮತ್ತು ಬರಿಸುವ ಮದ್ದುಗಳನ್ನು ನೀಡಿ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಆಕೆಯನ್ನು ಕೊಂದು ಶವವನ್ನು ಗ್ರಾಮದ ಸಮೀಪದ ಕೆರೆಯೊಂದರ ಬಳಿಯ ಪೊದೆಯಲ್ಲಿ ಎಸೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News