ಲಂಕಾ: ಇಬ್ಬರು ಮುಸ್ಲಿಮ್ ಗವರ್ನರ್‌ಗಳ ರಾಜೀನಾಮೆ

Update: 2019-06-03 18:19 GMT

ಕೊಲಂಬೊ, ಜೂ. 3: ಕ್ಯಾಂಡಿ ನಗರದಲ್ಲಿ ಬೌದ್ಧ ಬಿಕ್ಕುಗಳು ಸೇರಿದಂತೆ ಸಾವಿರಾರು ಮಂದಿ ಧರಣಿ ನಡೆಸಿದ ಬಳಿಕ, ಶ್ರೀಲಂಕಾದ ಇಬ್ಬರು ಮುಸ್ಲಿಮ್ ಗವರ್ನರ್‌ಗಳು ಸೋಮವಾರ ರಾಜೀನಾಮೆ ನೀಡಿದ್ದಾರೆ.

ಈಸ್ಟರ್ ರವಿವಾರದಂದು ದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ‘ಬೆಂಬಲಿಸುತ್ತಿರುವುದಕ್ಕಾಗಿ’ ಅವರನ್ನು ವಜಾಗೊಳಿಸಬೇಕು ಎಂಬುದಾಗಿ ಪ್ರತಿಭಟನಕಾರರು ಒತ್ತಾಯಿಸುತ್ತಿದ್ದರು.

ವೆಸ್ಟರ್ನ್ ಪ್ರಾವಿನ್ಸ್ ಗವರ್ನರ್ ಆಝಾದ್ ಸಾಲಿ ಮತ್ತು ಈಸ್ಟರ್ನ್ ಪ್ರಾವಿನ್ಸ್ ಗವರ್ನರ್ ಎಂ.ಎ.ಎಲ್.ಎಂ. ಹಿಝ್ಬುಲ್ಲಾ ತಮ್ಮ ರಾಜೀನಾಮೆ ಪತ್ರಗಳನ್ನು ದೇಶದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರಿಗೆ ಹಸ್ತಾಂತರಿಸಿದರು ಎಂದು ಅಧಿಕಾರಿಗಳು ಹೇಳಿದರು.

ಸಾಲಿ ಮತ್ತು ಹಿಝ್ಬುಲ್ಲಾ ಇಬ್ಬರೂ ಸಿರಿಸೇನರ ಮಿತ್ರಕೂಟದ ಸದಸ್ಯರಾಗಿದ್ದಾರೆ. ಅವರನ್ನು ಗವರ್ನರ್‌ಗಳಾಗಿ ಸಿರಿಸೇನರೇ ನೇಮಿಸಿದ್ದರು. ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ಆರೋಪಗಳನ್ನು ಎದುರಿಸಿದ ಬಳಿಕ ಅವರು ರಾಜೀನಾಮೆ ನೀಡುವ ಒತ್ತಡಕ್ಕೆ ಸಿಲುಕಿದ್ದರು.

ತಮ್ಮ ವಿರುದ್ಧದ ಆರೋಪಗಳನ್ನು ಇಬ್ಬರೂ ಗವರ್ನರ್‌ಗಳು ನಿರಾಕರಿಸಿದ್ದಾರೆ.

ಸಿರಿಸೇನರ ಮಿತ್ರಪಕ್ಷವೊಂದರ ಸಂಸದರೂ ಆಗಿರುವ ಬೌದ್ಧ ಬಿಕ್ಕು ಅತುರಲಿಯೆ ರತನ ಕ್ಯಾಂಡಿ ನಗರದ ಪ್ರಮುಖ ಬೌದ್ಧ ದೇವಾಲಯವಾಗಿರುವ ‘ಟೆಂಪಲ್ ಆಫ್ ಟೂತ್’ನ ಸಮೀಪ ಉಪವಾಸ ಮುಷ್ಕರ ಆರಂಭಿಸಿದ ನಾಲ್ಕು ದಿನಗಳ ಬಳಿಕ ಗವರ್ನರ್‌ಗಳು ರಾಜೀನಾಮೆ ನೀಡಿದ್ದಾರೆ.

‘‘ಇಬ್ಬರು ಮುಸ್ಲಿಮ್ ಗವರ್ನರ್‌ಗಳನ್ನು ಅಧ್ಯಕ್ಷರು ವಜಾಗೊಳಿಸಿದ ಬಳಿಕವಷ್ಟೇ ನಾನು ನನ್ನ ಉಪವಾಸವನ್ನು ಕೊನೆಗೊಳಿಸುತ್ತೇನೆ’’ ಎಂದು ತನ್ನ ಉಪವಾಸದ ಆರಂಭದಲ್ಲಿ ರತನ ಹೇಳಿದ್ದರು.

ಬೃಹತ್ ಪ್ರತಿಭಟನೆ

ಸೋಮವಾರ ಬೆಳಗ್ಗೆ ಸುಮಾರು 10,000 ಬೌದ್ಧರು ಈ ಪ್ರಸಿದ್ಧ ದೇವಾಲಯದಲ್ಲಿ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕೊಲಂಬೋದ ಕೆಥೋಲಿಕ್ ಚರ್ಚ್‌ನ ಮುಖ್ಯಸ್ಥ ಕಾರ್ಡಿನಲ್ ಮಾಲ್ಕಮ್ ರಂಜಿತ್ ಕೂಡ ರತನರಿಗೆ ಬೆಂಬಲ ವ್ಯಕ್ತಪಡಿಸಲು ಸೋಮವಾರ ಕ್ಯಾಂಡಿಗೆ ಪ್ರಯಾಣಿಸಿದರು.

 ಎಪ್ರಿಲ್ 21ರಂದು ದೇಶದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್‌ಗಳಲ್ಲಿ 258 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 500ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಐಸಿಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ ನ್ಯಾಶನಲ್ ತೌಹೀದ್ ಜಮಾಅತ್ ಎಂಬ ಶ್ರೀಲಂಕಾದ ಉಗ್ರಗಾಮಿ ಸಂಘಟನೆ ಭಯೋತ್ಪಾದಕ ದಾಳಿ ನಡೆಸಿದೆ ಎಂದು ಶ್ರೀಲಂಕಾ ಸರಕಾರ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News