ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿ ಸತತ ಸೋಲಿನಿಂದ ಹೊರ ಬಂದ ಪಾಕ್

Update: 2019-06-04 05:43 GMT

ಟ್ರೆಂಟ್‌ಬ್ರಿಡ್ಜ್, ಜೂ.4: ಪಾಕಿಸ್ತಾನ ತಂಡ ಸೋಮವಾರ ಆತಿಥೇಯ ಇಂಗ್ಲೆಂಡ್ ತಂಡವನ್ನು 14 ರನ್‌ನಿಂದ ಸೋಲಿಸಿ ಈ ವರ್ಷದ ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಮೊದಲ ಜಯ ದಾಖಲಿಸಿತ್ತು. ಈ ಗೆಲುವಿನ ಮೂಲಕ ಪಾಕ್ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 11 ಸೋಲುಗಳ ಸರಮಾಲೆಯನ್ನು ತುಂಡರಿಸಿತು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಜೋ ರೂಟ್(107) ಹಾಗೂ ಜೋಸ್ ಬಟ್ಲರ್(103) ಶತಕ ದಾಖಲಿಸಿದರೂ ಗುರಿ ತಲುಪಲು ವಿಫಲವಾಯಿತು.

ಗೆಲ್ಲಲು 349 ರನ್ ಗುರಿ ಪಡೆದ ಇಂಗ್ಲೆಂಡನ್ನು ಗೆಲುವಿನ ದಡ ಸೇರಿಸಲು ರೂಟ್ ಹಾಗೂ ಬಟ್ಲರ್ ಇನ್ನಿಲ್ಲದ ಪ್ರಯತ್ನ ನಡೆಸಿದರೂ ಫಲ ಸಿಗಲಿಲ್ಲ. ಈ ಜೋಡಿ 5ನೇ ವಿಕೆಟ್‌ಗೆ 130 ರನ್ ಸೇರಿಸಿತ್ತು. ಈ ಜೋಡಿ ಬೇರ್ಪಟ್ಟ ಬಳಿಕ ಬಾಲಂಗೋಚಿಗಳ ಮೇಲೆ ಒತ್ತಡವಿತ್ತು. ವಿಶ್ವಕಪ್‌ನ ಈ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 650ಕ್ಕೂ ಅಧಿಕ ರನ್ ಗಳಿಸಿವೆ.

ಪಂದ್ಯದ ಮುಖ್ಯಾಂಶಗಳು ಇಂತಿವೆ.

*ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿರುವ ಪಾಕ್ ಸತತ 11 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳ ಸೋಲಿನಿಂದ ಹೊರ ಬಂದಿದೆ.

*ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್(334) ಹಾಗೂ ಪಾಕಿಸ್ತಾನ(348)ಪಂದ್ಯವೊಂದರಲ್ಲಿ ಎರಡನೇ ಗರಿಷ್ಠ ಮೊತ್ತ (682)ಗಳಿಸಿವೆ. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ-ಶ್ರೀಲಂಕಾ ಒಟ್ಟು 688 ರನ್ ಗಳಿಸಿದ್ದವು.

*ಇಂಗ್ಲೆಂಡ್ ವಿಶ್ವಕಪ್ ಪಂದ್ಯದಲ್ಲಿ 2ನೇ ಬ್ಯಾಟಿಂಗ್ ಮಾಡಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿದೆ. ಇಂಗ್ಲೆಂಡ್ ತಂಡವೇ ಭಾರತ ವಿರುದ್ಧ ಈ ಹಿಂದೆ 8 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

*ಇಂಗ್ಲೆಂಡ್ 2015ರ ಸೆ.5ರ ಬಳಿಕ ಇದೇ ಮೊದಲ ಬಾರಿ ಸ್ವದೇಶದಲ್ಲಿ ಏಕದಿನ ಪಂದ್ಯವನ್ನು ಸೋತಿದೆ.

*ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಯಾವ ತಂಡ ಕೂಡ 328 ಅಥವಾ ಅದಕ್ಕಿಂತ ಹೆಚ್ಚು ರನ್ ಚೇಸಿಂಗ್ ಮಾಡಿಲ್ಲ. ಈ ಹಿಂದೆ 2011ರಲ್ಲಿ ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 328 ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು.

*ವಿಶ್ವಕಪ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಇಂಗ್ಲೆಂಡ್ ಪರ ಇಬ್ಬರು ದಾಂಡಿಗರು ಶತಕಗಳನ್ನು ಗಳಿಸಿದ್ದಾರೆ.

*ಇಬ್ಬರು ದಾಂಡಿಗರು ಶತಕ ಗಳಿಸಿದ ಹೊರತಾಗಿಯೂ ಮೊದಲ ಬಾರಿ ತಂಡವೊಂದು ವಿಶ್ವಕಪ್ ಪಂದ್ಯವನ್ನು ಸೋತಿದೆ.

*ಜೋಸ್ ಬಟ್ಲರ್(103 ರನ್, 75 ಎಸೆತ)ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ಶತಕ ಪೂರೈಸಿದ 9ನೇ ಆಟಗಾರನಾಗಿದ್ದಾರೆ.

*75 ಎಸೆತಗಳಲ್ಲಿ ಶತಕ ಪೂರೈಸಿದ ಬಟ್ಲರ್ ವಿಶ್ವಕಪ್‌ನಲ್ಲಿ ವೇಗದ ಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ.

*ಬಟ್ಲರ್ ಏಕದಿನ ವೃತ್ತಿಜೀವನದಲ್ಲಿ 300ಕ್ಕೂ ಅಧಿಕ ಬೌಂಡರಿ ಗಳಿಸಿದ್ದಾರೆ. ಈ ಮೈಲುಗಲ್ಲು ತಲುಪಿದ ಇಂಗ್ಲೆಂಡ್‌ನ 14ನೇ ಆಟಗಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News