ಗಾಂಜಾ ಮಾರಾಟ: ಸೊತ್ತು ಸಹಿತ ಆರೋಪಿ ಸೆರೆ
ಬಂಟ್ವಾಳ, ಜೂ. 4: ಗಾಂಜಾ ಮಾರಾಟದ ಆರೋಪದ ಮೇರೆಗೆ ಗಾಂಜಾ ಸಹಿತ ವ್ಯಕ್ತಿಯೋರ್ವನನ್ನು ಬಂಟ್ವಾಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಸಂಶುದ್ದೀನ್ (25) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು 1.896 ಕೆ.ಜಿ . ತೂಕದ ಸುಮಾರು
40 ಸಾವಿರ ರೂ. ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಜೂ. 3ರಂದು ಬಿ.ಮೂಡಾ ಗ್ರಾಮದ ತಲಪಾಡಿ ಬಳಿಯ ದುರ್ಗಾ ಗ್ಯಾರೇಜ್ ಬಳಿಯಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿಯಂತೆ ಬಂಟ್ವಾಳ ಎಸ್ಸೈ ಚಂದ್ರಶೇಖರ್ ಎಚ್.ವಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆಪಡೆಕೊಂಡಿದ್ದಾರೆ.
ಆರೋಪಿಯು ಉಳ್ಳಾಲದ ಮಿಸ್ಬಾ ಎಂಬಾತನಿಂದ ಉಪ್ಪಿನಂಗಡಿಯ ಓರ್ವ ವ್ಯಕ್ತಿಯ ಮುಖಾಂತರ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ 40 ಸಾವಿರ ರೂ. ಮೌಲ್ಯದ ಗಾಂಜಾ, ಮೊಬೈಲ್ ಹಾಗೂ 110 ರೂ. ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.