ಬಿಜೆಪಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದನ್ನು ರಾಜ್ಯದ ಜನತೆ ಕಂಡಿದ್ದಾರೆ: ಎ.ಸಿ.ವಿನಯರಾಜ್

Update: 2019-06-04 11:40 GMT

ಮಂಗಳೂರು: ಬಿಜೆಪಿ ಕರ್ನಾಟಕ ರಾಜ್ಯವನ್ನು ಆಡಳಿತ ಮಾಡಿದಂತಹ ಸಂದರ್ಭ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಡಿನೋಟಿಪೈ ಮಾಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದನ್ನು ರಾಜ್ಯದ ಜನತೆ ಕಂಡಿದ್ದಾರೆ ಮಾತ್ರವಲ್ಲದೇ ಅದಕ್ಕೆ ಶಿಕ್ಷೆಯನ್ನು ಕೂಡ ಜನತೆ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎ.ಸಿ ವಿನಯರಾಜ್ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆಯು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕೊಡುಗೆಯಾಗಿದ್ದು ಇದರ ಬಗ್ಗೆ ಬೆಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದ ಡಾ. ವಿ.ಎಚ್ ಆಚಾರ್ಯ ಅವರು ಇದೊಂದು ರಾಜ್ಯ ಸರ್ಕಾರದ ಹೆಮ್ಮೆಯ ಕೊಡುಗೆಯಾಗಿದೆ ಎಂದು ಪತ್ರಿಕಾಗೋಷ್ಟಿ ಕರೆಯುವುದರ ಮೂಲಕ ಘೋಷಣೆ ಮಾಡಿದ್ದನ್ನು ಕೋಟಾ ಶ್ರೀನಿವಾಸ ಪೂಜಾರಿಗಳು ಮರೆತಂತಿದೆ. ಇದರ ಬಗ್ಗೆ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಅವರು ಯಾಕೆ ಮೌನ ವಹಿಸಿದ್ದಾರೆ ಎಂಬುವುದನ್ನು ಶೀನಿವಾಸ ಪೂಜಾರಿಗಳು ಹೇಳಬೇಕಾಗಿದೆ ಎಂದು ಅವರು ಹೇಳಿದರು.

ಕುಡಿಯುವ ನೀರಿನ ಕೊರತೆಯ ಬಗ್ಗೆ ದ.ಕ.ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲಾಡಳಿತದ ಸಭೆ ಕರೆಯುವುದರ ಮೂಲಕ ಜನರಿಗೆ ತೊಂದರೆ ಯಾಗದಂತಹ ರೀತಿಯಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆಯನ್ನು ಮಾಡಿದ್ದು ಈಗಾಗಲೇ ರಾಜ್ಯ ಸರಕಾರದಿಂದ ಸುಮಾರು 6 ಕೋಟಿ ರೂ. ಬಿಡುಗಡೆ ಮಾಡಿಸಿರುತ್ತಾರೆ. ಮಾತ್ರವಲ್ಲದೇ ಧರ್ಮಸ್ಥಳದ ನೀರಿನ ಕೊರತೆಯನ್ನು ನೀಗಿಸಲು ಕಿಂಡಿ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗೆ ಆದೇಶ ಮಾಡಿದ್ದಾರೆ ಎಂದರು.

ದ.ಕ.ಜಿಲ್ಲೆಯಲ್ಲಿ ಏಳು ಮಂದಿ ಬಿಜೆಪಿ ಶಾಸಕರುಗಳು ಇದ್ದು ಕುಡಿಯುವ ನೀರಿನ ಕೊರತೆಯ ಬಗ್ಗೆ ಜನತೆಗೆ ಸ್ಪಂದಿಸುವ ಉದ್ದೇಶದಿಂದ ಅಧಿಕಾರಿಗಳ ಸಭೆಯನ್ನು ಕರೆಯದೆ ಬೇಕಾಬಿಟ್ಟಿ ಪತ್ರಿಕಾ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಅವರೂ ಕೂಡ ಆಡಳಿತ ಯಂತ್ರದ ಭಾಗ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಸ್ಪಂದಿಸಲು ಆಗ್ರಹಿಸುತ್ತೇನೆ. ಕೋಟಾ ಶ್ರೀನಿವಾಸ ಪೂಜಾರಿ  ಉಡುಪಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಕೊರತೆಯನ್ನು ನೀಗಿಲು ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಎನ್ನುವುದನ್ನು ವಿವರಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಎ.ಸಿ.ವಿನಯರಾಜ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News