ಉಡುಪಿ ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಶಿಖರ ಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ
ಉಡುಪಿ, ಜೂ.4: ಉಡುಪಿ ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಶಿಖರ ಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಇಂದು ಜರಗಿತು.
ಮೆರವಣಿಗೆಯನ್ನು ಮಾಣಿಲ ಕ್ಷೇತ್ರದ ಶ್ರೀಮೋಹನದಾಸ ಸ್ವಾಮೀಜಿ ಹಾಗೂ ಕೊಂಡೆವೂರು ಕ್ಷೇತ್ರದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಕೃಷ್ಣ ಪುನರೂರು, ಭುವನಾಭಿರಾಮ, ಮಟ್ಟು ಲಕ್ಷ್ಮೀ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ಯು ಕೆ.ಎಂ.ಮಾರ್ಗ, ಸಂಸ್ಕೃತ ಕಾಲೇಜು, ರಥಬೀದಿ ಮಾರ್ಗವಾಗಿ ಶ್ರೀಕೃಷ್ಣ ಮಠದಲ್ಲಿ ಸಮಾಪ್ತಿಗೊಂಡಿತು. ಮೈಸೂರು, ಮಂಗಳೂರು, ಸುರತ್ಕಲ್, ಸಾಸ್ತಾನ, ನೀಲಾವರ, ಮಂದಾರ್ತಿ, ಬೈಕಾಡಿಗಳಿಂದ ಸುಮಾರು 125ಕ್ಕೂ ಅಧಿಕ ವಾಹನಗಳಲ್ಲಿ ವಿವಿಧ ತರಕಾರಿ, ಹಣ್ಣು ಹಂಪಲು, ದವಸ ದಾನ್ಯ, ಮಟ್ಟುಗುಳ್ಳ ಗಳನ್ನು ಸಮರ್ಪಿಸಲಾಯಿತು.
ಅದೇ ರೀತಿ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ವಿದ್ಯೋದಯ ಕಾಲೇಜಿನ ವತಿಯಿಂದಲೂ ಹೊರೆಕಾಣಿಕೆ ಸಮರ್ಪಿಸಲಾಯಿತು. ಅಲ್ಲದೆ ಜಗದೀಶ್ ಭಟ್ ನೇತೃತ್ವದಲ್ಲಿ ವಿಕಲಚೇತನರು ತಮ್ಮ 16 ತ್ರಿಚಕ್ರ ವಾಹದಲ್ಲಿ ಹೊರೆಕಾಣಿಕೆ ಸಮರ್ಪಿಸಿದರು.
ಹೊರೆಕಾಣಿಕೆ ಮೆರವಣಿಗೆ ಶ್ರೀಮಠವನ್ನು ತಲುಪಿದಾಗ, ಕನಕ ಮಂಟಪದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಪಲಿಮಾರು ಕಿರಿಯ ಮಠಾಧೀಶ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಮಾಣಿಲ ಕ್ಷೇತ್ರದ ಶ್ರೀಮೋಹನ ದಾಸ ಸ್ವಾಮೀಜಿ ಹಾಗೂ ಕೊಂಡೆವೂರು ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.
ಮುಸ್ಲಿಮರಿಂದ ಹೊರೆಕಾಣಿಕೆ
ಶ್ರೀ ಪೇಜಾವರ ಸ್ವಾಮೀಜಿಗಳ ಮುಸ್ಲಿಂ ಅಭಿಮಾನಿ ಬಳಗದ ವತಿಯಿಂದ 6000ಲೀಟರ್ ಕುಡಿಯುವ ನೀರು ಹಾಗೂ 8 ಚೀಲ ಸೌತೆಕಾಯಿ, 80ಕೆ.ಜಿ. ಕುಂಬಳಕಾಯಿ, ಅಕ್ಕಿ, ಎಣ್ಣೆ, ಬೆಲ್ಲ ಸೇರಿದಂತೆ ನೂರಾರು ಕೆ.ಜಿ. ವಸ್ತುಗಳನ್ನು ಮೂರು ವಾಹನಗಳಲ್ಲಿ ಹೊರೆಕಾಣಿಕೆ ರೂಪದಲ್ಲಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಮುಹಮ್ಮದ್ ಆರೀಫ್, ಅನ್ಸಾರ್ ಅಹ್ಮದ್, ರೆಹ ಮತುಲ್ಲಾ, ನಬೀಲ್, ಅರ್ಷದ್, ಮೈತ್ರಿ ಮುಹಮ್ಮದ್ ಉಪಸ್ಥಿತರಿದ್ದರು.