ಪಡುಬಿದ್ರಿ: ಜೂ.5ರಂದು ವಿಶ್ವ ಪರಿಸರ ದಿನಾಚರಣೆ
ಉಡುಪಿ, ಜೂ.4: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರಾವಳಿ ನಿಯಂತ್ರಣ ಪ್ರಾಧಿಕಾರ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಥಾ ಮತ್ತು ಸಭಾ ಕಾರ್ಯಕ್ರಮ ಜೂ.5ರಂದು ಬೆಳಗ್ಗೆ 10:00ಕ್ಕೆ ಪಡುಬಿದ್ರಿಯ ರಮೇಶ್ ಮಹಾಬಲ ಶೆಟ್ಟಿ ಸಭಾಭವನ (ಬಂಟರ ಭವನ)ದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ.ಜೋಷಿ ಉದ್ಘಾಟಿಸ ಲಿದ್ದು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಹೆಜಮಾಡಿ ಟೋಲ್‌ನಿಂದ ಪಡುಬಿದ್ರಿ ರಮೇಶ್ ಮಹಾಬಲ ಶೆಟ್ಟಿ ಸಭಾಂಗಣದವರೆಗೆ ಪರಿಸರ ಜಾಥಾ ಮತ್ತು ಹೆಜಮಾಡಿ ಕ್ರೀಡಾಂಗಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.
ಬೀಚ್‌ನಲ್ಲಿ ವಿವಿಧ ಕಾರ್ಯಕ್ರಮ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಾಳೆ ಪಡಿಬಿದ್ರಿ ಬೀಚ್‌ನಲ್ಲಿ ವಿವಿಧ ಪರಿಸರ ಜಾೃತಿ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 8:00ರಿಂದ ಪಡುಬಿದ್ರಿ ಬೀಚ್‌ನಲ್ಲಿ ‘ಐ ಆ್ಯಮ್ ಸೇವಿಂಗ್ ಮೈ ಬೀಚ್’ ಆಂದೋಲನ ಹಾಗೂ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮ ಗಳು ನಡೆಯಲಿವೆ. ಸ್ಕೌಟ್ಸ್-ಗೈಡ್ಸ್ ಮಕ್ಕಳಿಂದ ಸೀಡ್ ಬಾಲ್ ತಯಾರಿಕಾ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಹೂವು ಕುಂಡ ತಯಾರಿ ಮಾಹಿತಿ, ವಿಶ್ವ ಪರಿಸರ ದಿನಾಚರಣೆ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಲಿದೆ.
ಇವುಗಳೊಂದಿಗೆ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವಲ್ಲಿ ಶ್ರಮ ವಹಿಸಿರುವ ಕರಾವಳಿ ಸ್ಟಾರ್ಸ್ ಪಡುಬಿದ್ರೆ, ಯಾರ್ಡ್ ಫ್ರೆಂಡ್ಸ್ ಗ್ರೂಪ್ ಉಳಿಯಾರಗೊಳಿ, ಸುದೇಶ ಶೇಟ್ಟಿ ಮಲ್ಪೆ, ಕ್ಲೀನ್ ಕುಂದಾಪುರ ಸಂಸ್ಥೆ ಮತ್ತು ಪಡುಬಿದ್ರಿ ಗ್ರಾಪಂನ್ನು ಗೌರವಿಸಲಾಗುವುದು.
ಬೀಚ್ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡಿರುವ ಮನೋಹರ ಶೆಟ್ಟಿ, ಡಾ.ವಿಜೇಂದ್ರ, ಉದಯ ಶೆಟ್ಟಿ, ಚಂದ್ರಕಾಂತ ಶೆಣೈ ಕುಂದಾಪುರ, ಡಾ. ಸ್ಟೀಟಿವನ್ ಜಾರ್ಜ್ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.