ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲು ಸಿದ್ದಗೊಂಡ ಕಾರ್ಯಪಡೆ!
ಕಾಪು, ಜೂ.4: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ದ ಕಟಪಾಡಿ ಸಮೀಪದ ಮಣಿಪುರ, ಕುರ್ಕಾಲು, ಚೊಕ್ಕಾಡಿ ಪ್ರದೇಶದ ಸ್ಥಳೀಯರು ರೊಚ್ಚಿಗೆದ್ದಿದ್ದು, ಈ ಅನಾಗರಿಕ ವರ್ತನೆಯನ್ನು ಮಟ್ಟಹಾಕಲು ಇಡೀ ಊರೇ ಸಂಘಟಿತವಾಗಿ ಬೀದಿಗಿಳಿದೆ.
ಕಟಪಾಡಿ -ಮಣಿಪುರ ರಸ್ತೆಯ ರೈಲ್ವೆ ಸೇತುವೆ ಸಮೀಪದ ರಸ್ತೆಯ ಇಕ್ಕೆಲ ಗಳಲ್ಲಿ ಹಲವು ವರ್ಷಗಳಿಂದ ಪ್ರತಿದಿನ ಹತ್ತಿರದ ಊರುಗಳ ಮನೆ, ಫ್ಲಾಟ್ ಗಳಲ್ಲಿ ಉತ್ಪತ್ತಿಯಾಗುವ ಕಸ, ಕೋಳಿ/ಮಾಂಸ, ಮಾಂಸ, ಚರ್ಮ ಸಹಿತ ಕೊಳಕು ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಇದರಿಂದ ಇಡೀ ಪರಿಸರ ಹಾಳಾಗಿ ಗಬ್ಬು ನಾರುತ್ತಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ರೋಸಿಹೋದ ಸ್ಥಳೀಯರು ಇದನ್ನು ಮಟ್ಟಹಾಕಲು ಸ್ವತಃ ತಾವೇ ಮುಂದಾಗಿದ್ದಾರೆ. ಕಸ ಎಸೆಯುವವರ ವಿರುದ್ಧ ರೊಚ್ಚಿಗೆದ್ದಿರುವ ಸಾರ್ವಜನಿಕರು ಸಂಘಟಿತರಾಗಿ ಪ್ರತಿರೋಧ ಒಡುತ್ತಿದ್ದಾರೆ. 30ಕ್ಕೂ ಅಧಿಕ ಮಂದಿ ಮಹಿಳೆ ಯರು ಮಕ್ಕಳ ಸಹಿತ ಯುವಕರ ಪಡೆ ಕಸ ಎಸೆಯುವವರಿಗೊಂದು ಪಾಠ ಕಲಿಸಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಜೂ.2ರಂದು ರಾತ್ರಿ ಕೈಯಲ್ಲಿ ದೊಣ್ಣೆ ಟಾರ್ಚ್‌ಲೈಟ್ ಹಿಡಿದು ರಸ್ತೆಗೆ ಇಳಿದಿರುವ ಸ್ಥಳೀಯರು, ಸಿಕ್ಕಿ ಬೀಳುವ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಲು ಸಜ್ಜಾಗಿದ್ದಾರೆ. ಸಣ್ಣಸಣ್ಣ ಗುಂಪುಗಳಾಗಿ ಮರೆಯಲ್ಲಿ ನಿಂತು ಕಸ ಎಸೆಯುವವರನ್ನು ಹಿಡಿಯುವ ಯೋಜನೆಯನ್ನು ರೂಪಿಸಿದ್ದಾರೆ. ಸಿಕ್ಕಿಬಿದ್ದವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಲು ನಿರ್ಧರಿಸಿದ್ದಾರೆ. ಅಗತ್ಯ ಬಿದ್ದರೆ ಕಾನೂನು ಕ್ರಮ ಜರಗಿಸಲು ಸಿದ್ದತೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಿದ್ದು, ಅದು ಈ ಭಾಗದಲ್ಲಿ ವೈರಲ್ ಆಗಿದೆ. ‘ನಾವಿಲ್ಲಿ ಕಾವಲಿದ್ದೇವೆ ಕಸ ಎಸೆ ಯುವವರು ಎಚ್ಚರ ವಹಿಸಿ, ಸಿಕ್ಕಿಬಿದ್ದರೆ ನಿಮಗೊಂದು ಪಾಠ ಕಲಿಸಲಿದ್ದೇವೆ’ ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ.
ಸ್ಥಳೀಯರಾದ ಬ್ರಾಯನ್ ಕೊರೇಯಾ, ಪೌಲ್ ಪಿರೇರಾ, ಜೆನೆಟ್ ಡಿಸಿಲ್ವಾ, ಜೋಸ್ ಮೊಂತರೂ, ಗ್ರೇಸಿ ಮೋತೇರೂ ಜಾನ್ ಕಾರ್ಲ, ಸಿಂಥಿಯಾ ಡಿಸೋಜ, ಗ್ರಾಪಂ ಸದಸ್ಯ ಮಹಮ್ಮದ್ ನಹೀಂ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ.