ಕೇಜ್ರಿವಾಲ್, ಸಿಸೋಡಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Update: 2019-06-04 16:47 GMT

ಹೊಸದಿಲ್ಲಿ, ಜೂ. 4: ಆಪ್ ವರಿಷ್ಠನ ಹತ್ಯೆ ಯತ್ನದ ಪಿತೂರಿಯಲ್ಲಿ ತಾನು ಪಾಲ್ಗೊಂಡಿರುವುದಾಗಿ ಹೇಳುವ ಮೂಲಕ ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಮಂಗಳವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

 ಕ್ಷಮೆ ಕೋರುವಂತೆ ಆಗ್ರಹಿಸಿ ಗುಪ್ತಾ ಅವರು ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರಿಗೆ ಒಂದು ವಾರಗಳ ಹಿಂದೆ ನೋಟಿಸು ಕಳುಹಿಸಿದ್ದರು. ‘‘ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು ನನ್ನ ನೋಟಿಸ್‌ಗೆ ಉತ್ತರಿಸದೇ ಇರುವುದರಿಂದ ನಾನು ಅವರ ವಿರುದ್ಧ ಪಾಟಿಯಾಲ ಹೌಸ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದೇನೆ.’’ ಎಂದು ದಿಲ್ಲಿ ವಿಧಾನ ಸಭೆಯ ಪ್ರತಿಪಕ್ಷದ ನಾಯಕರಾಗಿರುವ ಗುಪ್ತಾ ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರು ಹತ್ಯೆ ಯತ್ನದ ಪಿತೂರಿಯಲ್ಲಿ ತಪ್ಪಾಗಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಗುಪ್ತಾ ಅವರು ಈ ಹಿಂದೆ ಕೇಜ್ರಿವಾಲ್ ಹಾಗೂ ಸಿಸೋಡಿಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲೋಕಸಭಾ ಚುನಾವಣೆಯ ಸಂದರ್ಭ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಂತೆ ತನ್ನ ಭದ್ರತಾ ಸಿಬ್ಬಂದಿಯ ಮೂಲಕವೇ ತನ್ನನ್ನು ಹತ್ಯೆಗೈಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News