ಕೊಯಿಲ: ನಿವೃತ್ತ ಅಂಚೆ ಬಟವಾಡೆದಾರ ಕೊರಗಪ್ಪ ಪೂಜಾರಿಗೆ ಬೀಳ್ಕೊಡುಗೆ, ಸಮ್ಮಾನ
ಬಂಟ್ವಾಳ, ಜೂ. 4; ಸರಕಾರಿ ಉದ್ಯೋಗದಲ್ಲಿ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಗಳಿಂದ 40 ವರ್ಷ ಕರ್ತವ್ಯ ನಿರ್ವಹಿಸಿ, ಜನರ ಆದರಾಭಿಮಾನಗಳಿಸಿದ ಕೊರಗಪ್ಪ ಪೂಜಾರಿ ಅವರು ಗೌರವಾರ್ಹರು. ಉದ್ಯೋಗದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಶಿಕ್ಷಕಿ ಪಾವನಾದೇವಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕೊಯಿಲ ಅಂಚೆ ಕಚೇರಿಯಲ್ಲಿ ಸುಮಾರು 40 ವರ್ಷಗಳ ಕಾಲ ಗ್ರಾಮೀಣ ಅಂಚೆ ಬಟವಾಡೆದಾರರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕೊರಗಪ್ಪ ಪೂಜಾರಿ ಕೊೈಲ ಅವರಿಗೆ ಕೊಯಿಲ ಅಂಚೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗದ ವತಿಯಿಂದ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆದ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ್ ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರಗಪ್ಪ ಪೂಜಾರಿಯವರ ನಿವೃತ್ತಿ, ಅವರ ಸೇವೆಯಿಂದ ವಂಚಿತರಾಗುತ್ತಿದ್ದೇವೆ ಎಂಬುವುದು ಗ್ರಾಮಸ್ಥರಿಗೆ ಭಾವನಾತ್ಮಕ ವಿಚಾರವಾಗಿದೆ. ಅವರು ಕೇವಲ ಕರ್ತವ್ಯದಲ್ಲಿ ಮಾತ್ರವಲ್ಲದೆ ತನ್ನ ವ್ಯಕ್ತಿತ್ವದಿಂದಲೂ ಜನ ಪ್ರೀತಿ ಗಳಿಸಿದವರು. ಅವರನ್ನು ಗೌರವಿಸುವುದು ಊರವರ ಕರ್ತವ್ಯವಾಗಿದೆ ಎಂದು ಹೇಳಿದರು.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಅಧ್ಯಕ್ಷ ವಿಟ್ಠಲ ಎಸ್. ಪೂಜಾರಿ ಅವರು ಮಾತನಾಡಿ,ಕರ್ತವ್ಯದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ತನ್ನ ಹುದ್ದೆಗೆ ನ್ಯಾಯ ಒದಗಿಸಿದ ಕೊರಗಪ್ಪ ಪೂಜಾರಿ ಅವರ ಅನುಪಮ ಸೇವೆ ಮಾದರಿಯಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ದಾಮೋದರ ರಾವ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಣ್ಣ ರೈ, ಅಂಚೆ ಇಲಾಖೆ ಸಂಘಟನಾ ಕಾರ್ಯದರ್ಶಿ ಫ್ರಾನ್ಸಿಸ್ ಗೋವಿಯಸ್, ಸ್ಥಳೀಯ ಪ್ರಗತಿಪರ ಕೃಷಿಕ ವಾಲ್ಟರ್ ಫೆರ್ನಾಂಡಿಸ್, ನೋಣಯ ಶೆಟ್ಟಿ ಗಾರ್, ಬಂಟ್ವಾಳ ಉಪ ವಿಭಾಗ ನಿರೀಕ್ಷಕ ಸುನಿಲ್ ದೇವರಾಜ್, ಕೊಯಿಲ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ದಯಾವತಿ ಶೆಟ್ಟಿ, ಅರುಣಾ ಜೆ.ಶೆಟ್ಟಿ, ಗೋಪಾಲ ರೈ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಗಣೇಶ್ ಶೆಟ್ಟಿ ಸೇವಾ, ಕೊಯಿಲ ಸ.ಪ್ರೌ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಅವರು ನಿವೃತ್ತರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿ ಶುಭಹಾರೈಸಿದರು.
ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ದಯಾನಂದ ಸಪಲ್ಯ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮೇಲ್ವಚಾರಕಿ ಹರಿಣಾಕ್ಷಿ ರೈ, ಉದ್ಯಮಿ ಖಾದರ್ ಕೆ.ಎ., ಸಂಘಟಕ ರಾಮಚಂದ್ರ ಶೆಟ್ಟಿಗಾರ್, ಗ್ರಾಪಂ ಸದಸ್ಯರು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಸೇವಾ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊೈಲ ಗ್ರಾಮದ ನಾಗರಿಕರು , ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೊಯಿಲ ಒಕ್ಕೂಟ, ಸಿದ್ದಿಶ್ರೀ ಮಹಿಳಾ ಭಜನ ಮಂಡಳಿ ವತಿಯಿಂದ ಕೊರಗಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಊರ ಅಭಿಮಾನಿಗಳು ಗೌರವಾರ್ಪಣೆ ನಡೆಸಿದರು. ಕೊರಗಪ್ಪ ಪೂಜಾರಿ ವತಿಯಿಂದ ಪೋಸ್ಟ್ ಮಾಸ್ಟರ್ ದಯಾವತಿಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಕೊರಗಪ್ಪ ಪೂಜಾರಿ ಅವರು, ಅಂಚೆ ಬಟವಾಡೆ ಪವಿತ್ರ ಕಾರ್ಯ ಎಂದು ಭಾವಿಸಿ 40 ವರ್ಷ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ ಹೆಮ್ಮೆ ಇದೆ. ಊರ ಜನರ ಪ್ರೀತಿ ಅಭಿಮಾನವೇ ದೊಡ್ಡ ಕೊಡುಗೆಯಾಗಿದೆ. ಆದರೆ ಸರಕಾರದ ಸವಲತ್ತು ದೊರಕಿಲ್ಲ ಎಂಬ ನೋವಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಜಗದೀಶ ಕೊಯಿಲ ಸ್ವಾಗತಿಸಿದರು. ಸುಮಾ ನಾಗರಾಜ್ ಸನ್ಮಾನ ಪತ್ರ ವಾಚಿಸಿದರು. ವಿದ್ಯಾ ವಂದಿಸಿದರು. ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಿಂದ ಶರಸೇತು ಬಂಧ ಯಕ್ಷಗಾನ ತಾಳಮದ್ದಳೆ ನಡೆಯಿತು.