ಅಧಿಕಾರದ ದುರ್ಬಳಕೆ ಸಲ್ಲದು: ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಎಚ್ಚರಿಕೆ

Update: 2019-06-04 16:54 GMT

ಕಾನ್ಪುರ, ಜೂ.4: ಅಧಿಕಾರದ ದುರ್ಬಳಕೆಯಾಗದಂತೆ ಚುನಾಯಿತ ಸರಕಾರಗಳು ಎಚ್ಚರಿಕೆ ವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕಾನ್ಪುರದ ದೀನದಯಾಳ್ ಉಪಾಧ್ಯಾಯ ಸನಾತನ ಧರ್ಮ ವಿದ್ಯಾಲಯದಲ್ಲಿ ನಡೆಯುತ್ತಿರುವ ಪೂರ್ವ ವಲಯ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಪಾರ ಅಧಿಕಾರವಿರುತ್ತದೆ. ಆದರೆ ಅಧಿಕಾರವನ್ನು ದುರ್ಬಳಕೆ ಮಾಡಬೇಕು ಎಂದು ಇದರರ್ಥವಲ್ಲ. ಸರಕಾರ ಯಾವುದೇ ಹಂತದಲ್ಲಿ ತಪ್ಪೆಸಗಿದರೂ ಸಂಘ ಪರಿವಾರ ರಚನಾತ್ಮಕ ದೃಷ್ಟಿಕೋನದ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತದೆ ಎಂದು ಹೇಳಿದರು.

ಆರೆಸ್ಸೆಸ್ ಕಾರ್ಯಕರ್ತರು ಎಂದಿಗೂ ಅಹಂಕಾರಿಗಳಾಗಬಾರದು. ನೀವು ಎಷ್ಟೇ ಒಳ್ಳೆಯ ಕಾರ್ಯ ಮಾಡಿದರೂ, ಅಹಂಕಾರದ ಭಾವನೆಯಿದ್ದರೆ ಇದೆಲ್ಲಾ ವ್ಯರ್ಥವಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಾರ್ಯಕರ್ತರು ಗುಣಾತ್ಮಕ ಅಭಿವೃದ್ಧಿ ಹೊಂದಬೇಕು ಮತ್ತು ಸಮಾಜದೆಡೆ ಸಮರ್ಪಣಾ ಭಾವ ಹೊಂದಿರಬೇಕು .ಸಾಮಾಜಿಕ ಸಮಾನತೆಗಾಗಿ ಕಾರ್ಯ ನಿರ್ವಹಿಸಬೇಕು. ಅನಕ್ಷರತೆ, ಮಾದಕ ದ್ರವ್ಯ, ಮದ್ಯಪಾನ ಮುಂತಾದ ಸಾಮಾಜಿಕ ಪಿಡುಗು ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News