ಪರ್ಸ್ ಕಳವುಗೈದ ಆರೋಪ: ಮೂವರು ಸೆರೆ
ಮಂಗಳೂರು, ಜೂ.4: ನಗರದ ನೆಹರೂ ಮೈದಾನ ಸಮೀಪ ಕಾರಿನಿಂದ ಪರ್ಸ್ ಕಳವು ಮಾಡಿದ ಆರೋಪದಲ್ಲಿ ಮೂವರನ್ನು ಪಾಂಡೇಶ್ವರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಾಟೇಕಲ್ ಸಮೀಪದ ಮಂಜನಾಡಿಯ ಅಬ್ದುಲ್ ಖಾದರ್ (19), ಮುಹಮ್ಮದ್ ಸಾನಿದ್ (19), ಬೆಳ್ಮ ಗ್ರಾಮದ ದೇರಳಕಟ್ಟೆಯ ತಾಜುದ್ದೀನ್ ರೆಹಮಾನ್ (19) ಬಂಧಿತರು.
ಅಡ್ತೂರು ಡಿಸೋಜ ಎಂಬವರು ಮಂಗಳವಾರ ಮಧ್ಯಾಹ್ನ ತನ್ನ ಕಾರನ್ನು ನೆಹರೂ ಮೈದಾನದ ಬಳಿ ಪಾರ್ಕ್ ಮಾಡಿ ಹೋಗಿದ್ದರು. ಈ ಸಂದರ್ಭ ಅವರು ತನ್ನ ಪರ್ಸ್‌ನ್ನು ಕಾರಲ್ಲೇ ಬಿಟ್ಟು ಹೋಗಿದ್ದು ಮರಳಿ ಬರುವಾಗ ಕಾರಿನಲ್ಲಿದ್ದ ಪರ್ಸ್ ಕಾಣೆಯಾಗಿತ್ತು. ಈ ಬಗ್ಗೆ ಪಾಂಡೇಶ್ವರ ಠಾಣೆಗೆ ಅವರು ದೂರು ನೀಡಿದ್ದರು.
ಮಧ್ಯಾಹ್ನ ವೇಳೆ ಪಾಂಡೇಶ್ವರ ಪೊಲೀಸರು ಗಸ್ತಿನಲ್ಲಿದ್ದಾಗ ಆರೋಪಿಗಳು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಶಂಕೆಗೊಂಡ ಪೊಲೀಸರು ಬೆನ್ನಟ್ಟಿ ಹಿಡಿದಾಗ ಪರ್ಸ್ ಕಳವು ಆರೋಪಿಗಳೆಂದು ತಿಳಿದು ಬಂದಿದೆ. ಆರೋಪಿಗಳಿಂದ ಪರ್ಸ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 2ಸಾವಿರ ರೂ. ಮತ್ತು ಕೆಲವೊಂದು ಮಹತ್ವದ ದಾಖಲೆಗಳು ಸಿಕ್ಕಿದೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.