ಪರಿಸರ ದಿನದೊಂದಿಗೆ ಈದ್ ಸಂಭ್ರಮ
ಮಂಗಳೂರು, ಜೂ.5: ಜಮಾಅತ್ ವ್ಯವಸ್ಥೆಯನ್ನು ಸಮಾಜ ಬಾಂಧವರ ಸರ್ವಾಂಗೀಣ ಕಲ್ಯಾಣಕ್ಕಾಗಿ ವಿನಿಯೋಗಿಸುವ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಒಮ್ಮತದ ಅಭಿಪ್ರಾಯ ಮತ್ತು ಮಸೀದಿ ವಠಾರದಲ್ಲಿ ಗಿಡ ನೆಡುವ ಮೂಲಕ ಕಲ್ಲೆಗ ಜಮಾಅತ್ ಕಮೀಟಿಯು ಈದುಲ್ ಪಿತ್ರ್ ಹಬ್ಬ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ಅರ್ಥವತ್ತಾಗಿ ಆಚರಿಸಿತು.
ಜಮಾಅತ್ ಅಧ್ಯಕ್ಷರಾದ ಶಕೂರ್ ಹಾಜಿ ಮತ್ತು ಕಮೀಟಿ ಪದಾದಿಕಾರಿಗಳು ಮಸೀದಿಯ ವ್ಯಾಪ್ತಿಯಲ್ಲಿ ಮೂವತ್ತು ವರ್ಷ ದಾಟಿದ ಹೆಣ್ಣು ಮಕ್ಕಳ ಮದುವೆ, ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು. ಜನರಿಗೆ ಸೌಲಭ್ಯ ತಲುಪಿಸುವ ಹೆಲ್ಪ್ ಡೆಸ್ಕ್, ಕೌಂನ್ಸಿಲಿಂಗ್ ಸೆಂಟರ್ ಯೋಜನೆಯನ್ನು ಜಾರಿಗೊಳಿಸುವ ಮಹತ್ವ ತೀರ್ಮಾನವನ್ನು ಪ್ರಕಟಿಸುವ ಮೂಲಕ ಎಲ್ಲರ ವಿಶ್ವಾಸಗಳಿಸಿತು. ಜಮಾಅತ್ ವ್ಯಾಪ್ತಿಯಲ್ಲಿ ಯಾವುದೇ ಮದುವೆಗೆ ಲೆಟರ್ ಹೆಡ್ ಕೊಡುವುದನ್ನು ನಿಲ್ಲಿಸಿದ ಜಮಾಅತ್ ಕಮೀಟಿ, ಬಡ ಕುಟುಂಬದ ಯುವತಿಯರ ಮದುವೆಗೆ ನಿಧಿಯೊಂದನ್ನು ಸ್ಥಾಪಿಸಿತು. ಜಮಾಅತಿನ ಎನ್.ಆರ್.ಐ ಘಟಕದ ಸಹಭಾಗಿತ್ವದ ಮೂಲಕ ಜಮಾಅತ್ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣಕ್ಕೆ ಹೆಚ್ಚು ಒತ್ತು ಕೊಡುವ ಪ್ರಯತ್ನವನ್ನು ನಿರಂತರ ನಡೆಸುವ ಅಭಿಪ್ರಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತ್ ನ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿಯವರು, ಜಿಲ್ಲೆಯಲ್ಲಿ ಕಡೆಮೆ ಅಂದರೆ 100 ರುಪಾಯಿ ವಂತಿಗೆಯ ಮೂಲಕ ಕಾರ್ಯಾಚರಣೆ ಮಾಡುವ ಮಸೀದಿಯ ಪ್ರಯತ್ನ ಶ್ಲಾಘನೀಯವಾಗಿದ್ದು, ಹೀಗಿದ್ದು ಜಮಾಅತ್ ಜಿಲ್ಲೆಗೆ ಮಾದರಿಯಾದ ಪ್ರಯತ್ನವನ್ನು ಮಾಡುತ್ತಿರುವುದು ನಮಗೆ ಅಭಿಮಾನವಾಗಿದೆ ಎಂದರು. ಮಸೀದಿಯಲ್ಲಿ ಕಲಿಯುವ ವಿಧ್ಯಾರ್ಥಿಗಳಿಗೆ ಕ್ಯಾಂಟೀನ್ ತೆರೆದಿರುವ ಜಮಾಅತ್ ಕಮೀಟಿ, ಉನ್ನತ ವ್ಯಾಸಾಂಗ ಮಾಡುವ ವಿಧ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಅವರನ್ನು ನಾಡಿಗೆ ಅಭಿಮಾನವಾಗಿ ಬೆಳೆಸಬೇಕು ಎಂದರು. ಇತಿಹಾಸ ಪ್ರಸಿದ್ದ ಕಲ್ಲೆಗ ಜಮಾಅತ್ ನಾಡಿನ ಸೌಹಾರ್ದತೆ ಮತ್ತು ಶಾಂತಿಗೆ ಹೆಚ್ಚಿನ ಕೊಡುಗೆ ನೀಡಿದ್ದು ಇಲ್ಲಿನ ಹಿರಿಯರು ಬೆಳೆಸಿದ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಮಸೀದಿ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ಈ ಮಸೀದಿ ಪರಿಸರದಲ್ಲಿ, ಮಾವು- ಚಿಕ್ಕು- ತೆಂಗು- ಅಡಿಕೆ- ಬಾಳೆಕಾಯಿ- ಪೇರಳೆ- ಸೀತಾಫಲ- ಅನನಾಸು ಸೇರಿದಂತೆ ಎಲ್ಲಾ ಫಲ ನೀಡುವ ಸಸ್ಯವಳಿವೆ. ಈ ಮೊದಲು ಜಮಾಅತ್ ಗೆ ಟಾಲೆಂಟ್ ರಿಸರ್ಚ್ ಪೌಂಡೇಶನ್ ಸ್ವಚ್ಚ ಮತ್ತು ಸುಂದರ ಮಸೀದಿ ಎಂಬ ಪ್ರಶಸ್ತಿಯನ್ನು ನೀಡಿತ್ತು.