ಹೋಮ್‌ಸ್ಟೇ, ಪಿಜಿ ಗಳಿಗೆ ಶೀಘ್ರದಲ್ಲಿ ನಿಯಮಗಳು ಜಾರಿ: ಸಚಿವ ಯು.ಟಿ.ಖಾದರ್

Update: 2019-06-05 17:47 GMT

ಮಂಗಳೂರು: ನಗರಾಭಿವೃದ್ಧಿ ಇಲಾಖೆ ಹೋಮ್‌ಸ್ಟೇ ಮತ್ತು ಪೇಯಿಂಗ್ ಗೆಸ್ಟ್‌ಗಳಿಗೆ (ಪಿಜಿ) ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರಲಿದೆ. ನಿಯಮಗಳು ಅತೀ ಶೀಘ್ರದಲ್ಲಿ ಜಾರಿಯಾಗಲಿವೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ನಿಯಮಾವಳಿಗಳನ್ನು ರೂಪಿಸುವ ಸಲುವಾಗಿ ಇಲಾಖೆಯ ಅಧಿಕಾರಿಗಳು, ಕಾನೂನು ತಜ್ಞರ ಜೊತೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಕರಡು ನಿಯಮಾವಳಿಗಳನ್ನು ಸಿದ್ಧ ಪಡಿಸಲಾಗುತ್ತಿದೆ ಎಂದು ಹೇಳಿದ ಸಚಿವರು, ಹೊಸ ಕಾಯ್ದೆಯಿಂದ ಪಿಜಿ ನಡೆಸುವವರು ಮತ್ತು ನಿವಾಸಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ನಿಯಮಾವಳಿಯಲ್ಲಿ ನಿವಾಸಿಗಳ ಭದ್ರತೆ, ಮೂಲಭೂತ ಸೌಲಭ್ಯಗಳು, ನೋಂದಣಿ, ನಿವಾಸಿಗಳ ಸಾಮರ್ಥ್ಯ, ಪ್ರಾದೇಶಿಕ ನಿರ್ಬಂಧಗಳು ಸೇರಿದಂತೆ ಹಲವು ವಿಷಯಗಳನ್ನು ಪರಿಗಣಿಸಲಾಗುವುದು. ಪಿಜಿ, ಹೊಮ್‌ಸ್ಟೇಗಳನ್ನು ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ನೋಂದಣಿ ಮಾಡುವ ಪದ್ದತಿ ಜಾರಿಗೆ ಬರಲಿದೆ ಎಂದವರು ನುಡಿದರು.

ಹೋಮ್‌ಸ್ಟೇಗಳಿಗೆ ಪ್ರವಾಸೋಧ್ಯಮ ಇಲಾಖೆಯ ಅಡಿಯಲ್ಲಿ ಈಗಾಗಲೇ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೋಮ್‌ಸ್ಟೇಗಳು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಇವೆ. ಪಿಜಿಗಳು ಇರುವುದು ನಗರ ಪ್ರದೇಶದಲ್ಲಿ. ಪಿಜಿಗಳ ಹೆಸರಿನಲ್ಲಿ ನಡೆಯುವ ಶೋಷಣೆ ತಪ್ಪಿಸುವುದು ಮತ್ತು ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಜತೆಗೆ ಭದ್ರತೆ ನೀಡುವುದು ನಿಯಮಗಳನ್ನು ರೂಪಿಸುವ ಉದ್ದೇಶವಾಗಿದೆ ಎಂದರು.

ಹಲವಾರು ಸಂಘಸಂಸ್ಥೆಗಳು, ಸಾರ್ವಜನಿಕರು ಪಿಜಿಗಳು ಮತ್ತು ಹೋಮ್‌ಸ್ಟೇಗಳಿಗೆ ನಿಯಮಗಳನ್ನು ರೂಪಿಸುವಂತೆ ಬಹಳ ದಿನಗಳಿಂದ ಆಗ್ರಹಿಸುತ್ತಿದ್ದರು ಎಂದು ಸಚಿವರು ನುಡಿದರು.

ಆನ್‌ಲೈನ್ ತೆರಿಗೆ ಪಾವತಿ
ರಾಜ್ಯದ ಹತ್ತು ಮಹಾ ನಗರಪಾಲಿಕೆಗಳಲ್ಲಿ ಇ ಆಸ್ತಿ ಜಾರಿಗೊಳಿಸಲಾಗುವುದು. ಆಸ್ತಿ ತೆರಿಗೆ ಪಾವತಿ ಮತ್ತು ಖಾತೆ ಬದಲಾವಣೆ ಸೇವೆಯನ್ನು ಆನ್‌ಲೈನ್‌ಗೆ ಪರಿವರ್ತಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ನುಡಿದರು. ಯಾವುದೇ ರಜೆಗಳನ್ನು ರದ್ದು ಪಡಿಸುವ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಅಂತಹ ನಿರ್ಧಾರಗಳನ್ನು ಜಾರಿಗೆ ತರುವ ಮೊದಲು ಜನತೆಯ ಅಭಿಪ್ರಾಯವನ್ನು ಪಡೆಯಲಾಗುವುದು. ಗೊಂದಲ ಬೇಡ ಎಂದು ಸಚಿವರು ಸ್ಪಷ್ಟ ಪಡಿಸಿದರು.

ಜೂ.10ರ ತನಕ ನೀರು ಲಭ್ಯ

ರೇಶನಿಂಗ್ ಮೂಲಕ ಮಂಗಳೂರು ನಗರಕ್ಕೆ ನೀರು ಒದಗಿಸಲು ಸಕಾಲದಲ್ಲಿ ನಿರ್ಧಾರ ತೆಗೆದುಕೊಂಡ ಪರಿಣಾಮವಾಗಿ ಈ ತನಕ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಧ್ಯವಾಗಿದೆ. ತುಂಬೆ ಡ್ಯಾಂನಲ್ಲಿ ಜೂನ್ 10ರ ತನಕ ಒದಗಿಸುವಷ್ಟು ನೀರು ಲಭ್ಯವಿದೆ. ಮುಂದಿನ ಪರಿಸ್ಥಿತಿಯನ್ನು ಎದುರಿಸಲು ನಗರ ವ್ಯಾಪ್ತಿಯ ಖಾಸಗಿ-ಸರಕಾರಿ ಬಾವಿ ಮತ್ತು ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.

ನೀರು ಪೂರೈಕೆಗಾಗಿ ಟ್ಯಾಂಕರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ನೀರಿನ ಬರ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News