ಸೇನೆ ತೊಲಗುವವರೆಗೆ ಪ್ರತಿಭಟನೆ: ಸುಡಾನ್ ಪ್ರಜಾಪ್ರಭುತ್ವ ಹೋರಾಟಗಾರರ ಘೋಷಣೆ

Update: 2019-06-07 03:54 GMT

ಖಾರ್ಟೂಮ್ (ಸುಡಾನ್), ಜೂ. 6: ಸುಡಾನ್‌ನಲ್ಲಿ ಆಡಳಿತ ನಡೆಸುತ್ತಿರುವ ಸೇನಾ ಮಂಡಳಿಯು ತೊಲಗುವವರೆಗೆ ಹಾಗೂ ಪ್ರತಿಭಟನಕಾರರ ಹಂತಕರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವವರೆಗೆ ನಾಗರಿಕ ಅಸಹಕಾರ ಚಳವಳಿಯನ್ನು ಮುಂದುವರಿಸುವುದಾಗಿ ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸುತ್ತಿರುವ ನಾಯಕರು ಪಟತೊಟ್ಟಿದ್ದಾರೆ.

ದೇಶದ ಆಡಳಿತವನ್ನು ನಾಗರಿಕ ಸರಕಾರವೊಂದಕ್ಕೆ ಹಸ್ತಾಂತರಿಸಬೇಕು ಎಂಬುದಾಗಿ ಒತ್ತಾಯಿಸಿದ ಧರಣಿ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಸುಡಾನ್ ಸೇನೆ ಮೂರು ದಿನಗಳ ಕಾಲ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ 108ನ್ನು ತಲುಪಿದ ಬಳಿಕ ಪ್ರಜಾಪ್ರಭುತ್ವಪರ ಹೋರಾಟಗಾರರು ಈ ರೀತಿಯಾಗಿ ಪಣತೊಟ್ಟಿದ್ದಾರೆ.

ಆಘಾತಕಾರಿ ದೃಶ್ಯವೊಂದರಲ್ಲಿ, ಸೈನಿಕರು ಬುಧವಾರ ರಾಜಧಾನಿ ಖಾರ್ಟೂಮ್‌ನಲ್ಲಿ ನೈಲ್ ನದಿಯಿಂದ 40 ಪ್ರತಿಭಟನಕಾರರ ಶವಗಳನ್ನು ಹೊರದೆಗೆದರು.

 ಸೇನಾ ದಮನ ಕಾರ್ಯಾಚರಣೆಯನ್ನು ಪ್ರತಿಭಟಿಸಲು ದೇಶಾದ್ಯಂತ ಗುರುವಾರ ಪ್ರಮುಖ ರಸ್ತೆಗಳು ಮತ್ತು ಸೇತುವೆಗಳಲ್ಲಿ ತಡೆ ಏರ್ಪಡಿಸುವಂತೆ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ನೇತೃತ್ವ ವಹಿಸಿರುವ ‘ಸುಡಾನೀಸ್ ಪ್ರೊಫೆಶನಲ್ಸ್ ಅಸೋಸಿಯೇಶನ್’ ಜನರಿಗೆ ಕರೆ ನೀಡಿದೆ.

ಈ ಚಳವಳಿಯಿಂದಾಗಿ ದೀರ್ಘಾವಧಿಯಿಂದ ಸರಕಾರ ನಡೆಸುತ್ತಿದ್ದ ಮಾಜಿ ಅಧ್ಯಕ್ಷ ಉಮರ್ ಅಲ್ ಬಶೀರ್‌ರನ್ನು ಸೇನೆ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

 ಖಾರ್ಟೂಮ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಎದುರುಗಡೆ ಧರಣಿ ನಡೆಸುತ್ತಿದ್ದ ಜನರನ್ನು ಸೋಮವಾರ ಹಿಂಸಾತ್ಮಕವಾಗಿ ತೆರವುಗೊಳಿಸಲು ಸೇನೆ ಮುಂದಾದಾಗ ದಮನ ಕಾರ್ಯಾಚರಣೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News