ನಿವೃತ್ತ ಸೈನಿಕನನ್ನು ವಿದೇಶಿ ಎಂದು ಘೋಷಣೆ: ಕೇಂದ್ರ, ಅಸ್ಸಾಂ ಸರಕಾರಕ್ಕೆ ನೋಟಿಸ್

Update: 2019-06-07 13:59 GMT

ಗುವಹಾಟಿ, ಜೂ.7: ಭಾರತೀಯ ಸೇನೆಯ ಮಾಜಿ ಸೈನಿಕ ಮುಹಮ್ಮದ್ ಸನಾವುಲ್ಲ ಅವರನ್ನು ವಿದೇಶಿ ಎಂದು ಘೋಷಿಸಿ ಬಂಧನ ಕೇಂದ್ರಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಹಾಟಿ ಉಚ್ಚ ನ್ಯಾಯಾಲಯ ಕೇಂದ್ರ ಮತ್ತು ಅಸ್ಸಾಂ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ಸನಾವುಲ್ಲ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ನೋಟಿಸ್ ಜಾರಿ ಮಾಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಾಧಿಕಾರಗಳು ಮತ್ತು ಅಸ್ಸಾಂ ಗಡಿ ಪೊಲೀಸ್‌ನ ತನಿಖಾಧಿಕಾರಿ ಚಂದ್ರಮಲ್ ದಾಸ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಭಾರತೀಯ ಸೇನೆಯಲ್ಲಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮುಹಮ್ಮದ್ ಸನಾವುಲ್ಲ ನಂತರ ಅಸ್ಸಾಂ ಗಡಿ ಪೊಲೀಸ್ ಪಡೆ ಸೇರಿದ್ದರು. ಅವರನ್ನು ವಿದೇಶಿ ಎಂಬ ನೆಲೆಯಲ್ಲಿ ಕಳೆದ ತಿಂಗಳು ಬಂಧಿಸಿ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಸನಾವುಲ್ಲ ಅವರ ಪ್ರಕರಣದ ವರದಿಗೆ ಸಹಿ ಹಾಕಿದ್ದರು ಎಂದು ಆರೋಪಿಸಲಾಗಿರುವ ಮೂವರು ಈ ಪ್ರಕರಣದಲ್ಲಿ ಯಾವುದೇ ತನಿಖೆ ನಡೆದಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅವರು, ಚಂದ್ರಮಲ್ ದಾಸ್ ತನಿಖಾ ವರದಿಯನ್ನು ತಿರುಚಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶುಕ್ರವಾರ ಸರಕಾರ ಮತ್ತು ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಮುಹಮ್ಮದ್ ಸನಾವುಲ್ಲಗೆ ಜಾಮೀನು ಮಂಜೂರು ಮಾಡಿದೆ. ಸರ್ವೊಚ್ಚ ನ್ಯಾಯಾಲಯದ ಖ್ಯಾತ ಮಹಿಳಾ ನ್ಯಾಯವಾದಿ ಇಂದಿರಾ ಜೈಸಿಂಗ್, ಸನಾವುಲ್ಲ ಪರ ವಕಾಲತ್ತು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News