ಉಪ್ಪಿರ: 50 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ; ಉದ್ಯಮಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ
ಬಂಟ್ವಾಳ : ತಾಲೂಕಿನ ಸಿದ್ಧಕಟ್ಟೆ-ಪೂಂಜ ರಸ್ತೆ ನಡುವಿನ ಉಪ್ಪಿರ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 50 ಮನೆಗಳಿಗೆ ಉದ್ಯಮಿಯೊಬ್ಬರು ಪಿಕಪ್ ವಾಹನದಲ್ಲಿ ಟ್ಯಾಂಕ್ ಮೂಲಕ ಉಚಿತ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದಲ್ಲಿ ಸುಮಾರು 100 ಮನೆಗಳಿಗೆ ಎರಡು ಕೊಳವೆ ಬಾವಿಗಳ ಮೂಲಕ 1 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕಿನಿಂದ ಪ್ರತೀ ವರ್ಷ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈ ಬಾರಿ ಎರಡೂ ಕೊಳವೆ ಬಾವಿ ಕೂಡಾ ಬತ್ತಿ ಹೋದ ಹಿನ್ನೆಲೆಯಲ್ಲಿ ಶೇ.75ರಷ್ಟು ಮನೆಗಳಿಗೆ ಕುಡಿಯುವ ನೀರಿಗೆ ಬರ ಎದುರಾಗಿದೆ. ಇಲ್ಲಿನ ಉಪ್ಪಿರ, ಶಾಲಾ ಬಳಿ, ಮಂಚಕಲ್ಲು ಮತ್ತಿತರ ಬಹುತೇಕ ಕೂಲಿ ಕಾರ್ಮಿಕರು ವಾಸಿಸುತ್ತಿರುವ ಕಾಲನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ದೂರದ ಕೃಷಿಕರ ತೋಟ ಮತ್ತಿತರ ಕಡೆಗಳಿಗೆ ತೆರಳಿ ನೀರು ತರಬೇಕಾಗಿತ್ತು.
ಈ ಬಗ್ಗೆ ವಿಷಯ ತಿಳಿದ ಇಲ್ಲಿನ ಹೊಕ್ಕಾಡಿಗೋಳಿ ಉದ್ಯಮಿ ರಾಘವೇಂದ್ರ ಭಟ್ ಅವರು ತನ್ನ ಪಿಕಪ್ ವಾಹನದಲ್ಲಿ ಒಂದೂವರೆ ಸಾವಿರ ಲೀ.ಸಾಮರ್ಥ್ಯದ ಟ್ಯಾಂಕಿನಲ್ಲಿ ನೀರು ತುಂಬಿಕೊಂಡು ಸ್ವತಃ ಅಲ್ಲಿಗೆ ತೆರಳಿ ಉಚಿತ ನೀರು ಪೂರೈಕೆ ಮಾಡುತ್ತಿದ್ದಾರೆ.
ಪದವೀಧರರಾಗಿರುವ ಭಟ್ ಫಿನೋಲೆಕ್ಸ್ ಪೈಪ್ ಡೀಲರ್ ಉದ್ಯಮ ನಡೆಸುತ್ತಿದ್ದು, ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡು ಸ್ಥಳೀಯ ಹೊಕ್ಕಾಡಿಗೋಳಿ ಕಂಬಳ ಸಮಿತಿಯಲ್ಲಿ ಸಕ್ರಿರಾಗಿದ್ದಾರೆ. ಇವರು ತನ್ನ ಮನೆ ಮತ್ತು ಅಡಿಕೆ ತೋಟಕ್ಕಾಗಿ ಕಳೆದ ಕೆಲವು ವರ್ಷಗಳ ಹಿಂದೆ 900 ಅಡಿ ಆಳಕ್ಕೆ ಕೊರೆದ ಕೊಳವೆ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಇದೀಗ ತನ್ನ ಉದ್ಯಮ ಮತ್ತಿತರ ಕ್ರಿಯಾಶೀಲ ಚಟುವಟಿಕೆ ನಡುವೆಯೂ ಕಳೆದ ಒಂದು ತಿಂಗಳಿನಿಂದ ದಿನವೊಂದಕ್ಕೆ ಮೂರ್ನಾಲ್ಕು ಬಾರಿ ಸುಮಾರು 5 ಸಾವಿರ ಲೀಟರಿನಷ್ಟು ಉಚಿತ ನೀರು ಪೂರೈಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಇವರು ಸ್ವತಃ ಬಂದು ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.