ವಿಚಾರವಾದಿ ರಾಮ್ ಪುನಿಯಾನಿಗೆ ಜೀವಬೆದರಿಕೆ ಕರೆ: ಎಫ್‌ಐಆರ್ ದಾಖಲು

Update: 2019-06-07 15:07 GMT

ಮುಂಬೈ, ಜೂ.7: ಖ್ಯಾತ ಶಿಕ್ಷಣತಜ್ಞ, ವಿಚಾರವಾದಿ ರಾಮ್ ಪುನಿಯಾನಿಯವರಿಗೆ ಜೂನ್ 6ರಂದು ಸಂಘಪರಿವಾರದವರೆನ್ನಲಾದ ಅಪರಿಚಿತ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ. ಐಐಟಿ ಬಾಂಬೆಯ ಮಾಜಿ ಪ್ರೊಫೆಸರ್, ಸಿವಿಲ್ ಸೊಸೈಟಿಯ ಪ್ರಮುಖ ಸದಸ್ಯ ರಾಮ್ ಪುನಿಯಾನಿಯವರ ಸ್ಥಿರ ದೂರವಾಣಿಗೆ ಗುರುವಾರ ರಾತ್ರಿ ಸುಮಾರು 8:30ರ ವೇಳೆ ದೂರವಾಣಿ ಕರೆ ಮಾಡಿದಾಗ ಅವರ ಸಹೋದರ ಫೋನ್ ಎತ್ತಿದ್ದಾರೆ. ಆಗ ಪುನಿಯಾನಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆ ವ್ಯಕ್ತಿ, ಪುನ್ಯಾನಿ ಹಿಂದೂ ವಿರೋಧಿ ಎಂದು ದೂಷಿಸಿದ್ದಾನೆ. ಇಂತಹ ಕಾರ್ಯಗಳನ್ನು ಪುನಿಯಾನಿ ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇನ್ನು 15 ದಿನದೊಳಗೆ ಪುನಿಯಾನಿ ಇಲ್ಲಿಂದ ಹೊರಡಬೇಕು ಎಂದು ಗದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

5 ನಿಮಿಷದ ಬಳಿಕ ಮತ್ತೊಂದು ಫೋನ್ ಕರೆ ಬಂದಾಗ ಪುನಿಯಾನಿಯವರೇ ಕರೆಯನ್ನು ಸ್ವೀಕರಿಸಿದ್ದಾರೆ. ಪುನಿಯಾನಿ ಮಾತಾಡುತ್ತಿರುವುದಲ್ಲವೇ ಎಂದು ಕರೆ ಮಾಡಿದ ವ್ಯಕ್ತಿ ಗದರುವ ಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ಅಲ್ಲ ಎಂದುತ್ತರಿಸಿದಾಗ ಕೆಲ ಹೊತ್ತು ಆತ ಕಾದು ಬಳಿಕ ಕರೆಯನ್ನು ಕಟ್ ಮಾಡಿದ್ದಾನೆ ಎಂದು ಪುನಿಯಾನಿ ದೂರವಾಣಿ ಕರೆಯ ನಂಬರ್ ಉಲ್ಲೇಖಿಸಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಸಾದಾ ವಸ್ತ್ರದಲ್ಲಿದ್ದ ಕೆಲವು ವ್ಯಕ್ತಿಗಳು ತಾವು ಪೊಲೀಸರು ಎಂದು ಹೇಳಿಕೊಂಡು ಪುನಿಯಾನಿಯವರ ಮನೆಗೆ ಆಗಮಿಸಿ, ಪಾಸ್‌ಪೋರ್ಟ್ ಕುರಿತು ಕೆಲವು ಮಾಹಿತಿಗಳನ್ನು ಕೇಳಿದ್ದರು. ಸಾಮಾನ್ಯವಾಗಿ ಇಂತಹ ವಿಚಾರಣೆಯನ್ನು ಸಮವಸ್ತ್ರ ಧರಿಸಿರುವ ಪೊಲೀಸರು ಮಾಡುತ್ತಾರೆ.

ಆದ್ದರಿಂದ ಈ ಘಟನೆಯ ಬಗ್ಗೆ ಸಂಶಯವಿದೆ. ಈ ಘಟನೆ ತಮ್ಮ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪುನಿಯಾನಿ ತಿಳಿಸಿದ್ದಾರೆ. ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಳ್ಕರ್, ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿಯವರನ್ನು ಬಲಪಂಥೀಯ ಗೂಂಡಾಗಳು ಹತ್ಯೆ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ತನ್ನ ಸುರಕ್ಷತೆಯ ಬಗ್ಗೆ ಕುಟುಂಬದವರು ಆತಂಕಿತರಾಗಿದ್ದು ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪುನಿಯಾನಿ ಆಗ್ರಹಿಸಿದ್ದಾರೆ. ಮುಂಬೈಯ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಹಿತಿಗಳು ಬೆದರಿಕೆ ಕರೆಯನ್ನು ಖಂಡಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಜೂಲಿಯೊ ರಿಬೇರಿಯೊ ಅವರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News