ಬಿಲ್ಕಿಸ್ ಬಾನು ಪ್ರಕರಣ: ಆರೋಪಿ ಐಪಿಎಸ್ ಅಧಿಕಾರಿ ನಿವೃತ್ತಿಯ ಒಂದು ದಿನ ಮುನ್ನ ವಜಾ

Update: 2019-06-07 15:18 GMT

ಅಹ್ಮದಾಬಾದ್, ಜೂ. 7: ಅಹ್ಮದಾಬಾದ್ ರಸ್ತೆ ಸಂಚಾರ (ಪಶ್ಚಿಮ)ದ ಉಪ ಆಯುಕ್ತ ಆರ್.ಎಸ್. ಭಾಗೋರಾನನ್ನು ನಿವೃತ್ತಿಗೆ ಒಂದು ದಿನ ಮೊದಲೇ ಕೇಂದ್ರ ಗೃಹ ಸಚಿವಾಲಯ ಸೇವೆಯಿಂದ ವಜಾಗೊಳಿಸಿದೆ. ಅಹ್ಮದಾಬಾದ್ ನಗರದದ ಪೊಲೀಸ್ ಜಂಟಿ ಆಯುಕ್ತ (ರಸ್ತೆ ಸಂಚಾರ) ಜೆ.ಆರ್. ಮೊಥಾಲಿಯಾ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಸಂದರ್ಭ ಕರ್ತವ್ಯ ಲೋಪ ಎಸಗಿದ ಹಾಗೂ ತನಿಖೆಯ ವೇಳೆ ಸಾಕ್ಷಿ ನಾಶಪಡಿಸಿದ ಆರೋಪಿಗಳೆಂದು ನ್ಯಾಯಾಲಯ ಭಾಗೋರಾ ಹಾಗೂ ಇತರ ನಾಲ್ವರು ಪೊಲೀಸ್ ಸಿಬ್ಬಂದಿ ಪರಿಗಣಿಸಿತ್ತು. ಆರೋಪಿಗಳೆಂದು ಪರಿಗಣಿತರಾದವರ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ಗುಜರಾತ್ ಸರಕಾರಕ್ಕೆ ಆದೇಶಿಸಿತ್ತು. ಭಾಗೋರಾ ಮೇ 31ರಂದು ನಿವೃತ್ತನಾಗಬೇಕಿತ್ತು. ಆದರೆ, ಮೇ 30ರಂದೆ ಆತನನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಸರಕಾರದ ಉದ್ಯೋಗಿಗಳಿಗೆ ನೀಡಲಾಗುವ ಯಾವುದೇ ಸೌಲಭ್ಯಗಳನ್ನು ಆತ ಪಡೆಯಲಾರ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾಗೋರಾ 1996ರಲ್ಲಿ ಸೇವೆಗೆ ಸೇರಿದ್ದ. 2012ರಲ್ಲಿ ಆತ ಭಡ್ತಿ ಹೊಂದಿದ್ದ. ಭಾಗೋರಾನ ವಜಾದ ಬಗ್ಗೆ ನನಗೆ ತಿಳಿದಿಲ್ಲ ಎಂದು ಗುಜರಾತ್‌ನ ಸಹಾಯಕ ಸಚಿವ ಪ್ರದೀಪ್ ಸಿನ್ಹಾ ಹೇಳಿದ್ದಾರೆ. ‘‘ಕೇಂದ್ರ ಗೃಹ ಕಾರ್ಯದರ್ಶಿ ಅವರಿಂದ ನಾನು ಯಾವುದೇ ಮಾಹಿತಿ ಸ್ವೀಕರಿಸಿಲ್ಲ’’ ಎಂದು ಅವರು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿ ಭಾಗೋರಾ 2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ. 2002ರಲ್ಲಿ ಗುಜರಾತ್ ಗಲಭೆಯ ಸಂದರ್ಭ 11 ಮಂದಿ ಬಾನು ಅವರ ಮೇಲೆ ಅತ್ಯಾಚಾರ ಎಸಗಿದ್ದರು. ಈ ಸಂದರ್ಭ ಬಾನು 19 ವರ್ಷದ ಯುವತಿಯಾಗಿದ್ದರು. ಅಲ್ಲದೆ ಗರ್ಭಿಣಿಯಾಗಿದ್ದರು. ಅಹ್ಮದಾಬಾದ್‌ನ ಸಮೀಪ ಸಂಭವಿಸಿದ ಈ ಘಟನೆಯಲ್ಲಿ ಗಲಭೆಕೋರರು ಮೂರು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ 14 ಮಂದಿಯನ್ನು ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News