ಅಮಾಸೆಬೈಲು ಗ್ರಾಪಂ: ಸೋಲಾರ್ ದೀಪಗಳ ಕೊಡುಗೆ ಸಮಾರೋಪ
ಉಡುಪಿ, ಜೂ.7: ನಕ್ಸಲ್ ಬಾಧಿತ ಅಮಾಸೆಬೈಲ್ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಮನೆಯಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ದೀಪಗಳ ಕೊಡುಗೆಯ ಸಮಾರೋಪ ಸಮಾರಂಭ ಜೂ.9ರ ರವಿವಾರ ಅಮಾಸೆಬೈಲ್ ನಲ್ಲಿ ನಡೆಯಲಿದೆ ಎಂದು ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಅಮಾಸೆಬೈಲು, ರಟ್ಟಾಡಿ ಹಾಗೂ ಮಚ್ಚಟ್ಟು ಗ್ರಾಮಗಳಲ್ಲಿರುವ ಒಟ್ಟು 1872 ಮನೆಗಳಲ್ಲಿ 1697 ಮನೆಗಳಿಗೆ ಸೋಲಾರ್ ವಿಕೇಂದ್ರೀತ ಬೆಳಕಿನ ವ್ಯವಸ್ಥೆಯನ್ನು ಟ್ರಸ್ಟ್‌ನ ವತಿಯಿಂದ ಮೂರು ಹಂತಗಳಲ್ಲಿ ಅಳವಡಿಸಲಾಗಿದೆ ಎಂದರು.
ಇಡೀ ಅಮಾಸೆಬೈಲ್ ಗ್ರಾಪಂನ್ನು ದೇಶದ ಮೊತ್ತಮೊದಲ ಸೋಲಾರ್ ಗ್ರಾಮವಾಗಿ ಮಾಡುವ ಯೋಜನೆಯನ್ನು ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ 2016ರ ಮೇ ತಿಂಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್ ಮಂಗಳೂರು, ಅಮಾಸೆಬೈಲು ಗ್ರಾಪಂ, ಕರ್ನಾಟಕ ನವೀಕರಿಸಲಾಗುವ ಇಂಧನ ಅಭಿವೃದ್ಧಿ ಇಲಾಖೆ (ಕೆಆರ್‌ಇಡಿಎಲ್), ಉಡುಪಿ ಜಿಲ್ಲಾಡಳಿತ ಹಾಗೂ ಸೆಲ್ಕೋ ಸೋಲಾರ್ ಲೈಟ್ ಲಿ. ಇವುಗಳ ಸಂಯುಕ್ತ ಸಹಯೋಗದಲ್ಲಿ ಪ್ರಾರಂಭಿಸಲಾಗಿತ್ತು ಎಂದು ಮಾಜಿ ಶಾಸಕರೂ ಆಗಿರುವ ಎ.ಜಿ.ಕೊಡ್ಗಿ ನುಡಿದರು.
ಅಮಾಸೆಬೈಲು ಸೋಲಾರ್ ಗ್ರಾಮ ಯೋಜನೆ 2016ರ ಮೇ ತಿಂಗಳಿನಿಂದ 2017ರ ಮಾರ್ಚ್ ತಿಂಗಳವರೆಗೆ ಒಟ್ಟು ಮೂರು ಹಂತಗಳಲ್ಲಿ ಅನುಷ್ಠಾನ ಗೊಂಡಿದೆ. ಗ್ರಾಪಂ ವ್ಯಾಪ್ತಿಯಲ್ಲಿ 27 ದಾರಿಗಳನ್ನು ಹಾಗೂ ಎಲ್ಲಾ ಆರಾಧನಾ ಮಂದಿರಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಸೋಲಾರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಗ್ರಾಪಂನ ಪ್ರತಿ ಮನೆಗೂ ಸೋಲಾರ್ ದೀಪಗಳನ್ನು ಅಳವಡಿಸುವ ಗುತ್ತಿಗೆಯನ್ನು ಸೆಲ್ಕೋ ಸೋಲಾರ್ ಲೈಟ್ ಪ್ರೈವೆಟ್ ಲಿ.ಗೆ ಇ-ಟೆಂಡರ್ ಮೂಲಕ ವಹಿಸಲಾಗಿದ್ದು, ಅವರು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐದು ವರ್ಷಗಳ ಕಾಲ ವರ್ಷಕ್ಕೆ ಎರಡು ಬಾರಿಯಂತೆ ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಸೆಲ್ಕೋಕ್ಕೆ ವಹಿಸಲಾಗಿದೆ ಎಂದು ಕೊಡ್ಗಿ ತಿಳಿಸಿದರು.
ಪ್ರತಿ ಮನೆಗೆ ಎರಡು ಸೋಲಾರ್ ಲೈಟ್‌ಗಳನ್ನು ಅಳವಡಿಸಲುಬರುವ ಖರ್ಚು 9,900 ಹಾಗೂ ನಾಲ್ಕು ಸೋಲಾರ್ ದೀಪ ಅಳವಡಿಕೆಗೆ 16,000 ರೂ. ಖರ್ಚು ಬರುತ್ತದೆ. ಆದರೆ ಇದಕ್ಕಾಗಿ ಫಲಾನುಭವಿಗಳು ಪ್ರತಿ ಮನೆಯಿಂದ 2 ದೀಪಕ್ಕೆ 3000ರೂ. ಹಾಗೂ 4 ದೀಪಗಳಿಗೆ 6,000ರೂ. ಗಳನ್ನು ಪಡೆಯಲಾಗಿದೆ. ಗ್ರಾಮದ ಕೊರಗ ಸಮುದಾಯದ ಎಲ್ಲಾ ಮನೆಗಳಿಗೂ ಗ್ರಾಪಂ ವತಿಯಿಂದ ಉಚಿತವಾಗಿ ತಲಾ ಎರಡು ದೀಪಗಳನ್ನು ಅಳವಡಿಸಲಾಗಿದೆ. ಪ.ಜಾತಿ ಮತ್ತು ಪ.ಪಂಗಡ ಮನೆಗಳಿಗೆ ತಲಾ 2000 ರೂ.ಗಳನ್ನು ಗ್ರಾಪಂ ಭರಿಸಿದೆ ಎಂದವರು ವಿವರಿಸಿದರು.
ಇಡೀ ಯೋಜನೆಯ ಒಟ್ಟು ವೆಚ್ಚ 2.13 ಕೋಟಿ ರೂ.ಗಳಾಗಿವೆ. ಇವುಗಳಲ್ಲಿ 36.91 ಲಕ್ಷ ರೂ.ಗಳನ್ನು ಕೇಂದ್ರದ ಎಂಎನ್‌ಆರ್‌ಇ, 42.78 ಲಕ್ಷ ರೂ.ಗಳನ್ನು ರಾಜ್ಯದ ಕೆಆರ್‌ಇಡಿಎಲ್, ರಾಜ್ಯ ಸರಕಾರದಿಂದ 26.14 ಲಕ್ಷ ರೂ., ನಕ್ಸಲ್ ಪ್ಯಾಕೇಜ್‌ನಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಮೊತ್ತ 25 ಲಕ್ಷ ರೂ., ಗ್ರಾಮದ 1497 ಫಲಾನುಭವಿಗಳು ನೀಡಿದ ಒಟ್ಟು ಮೊತ್ತ 77.31 ಲಕ್ಷ ರೂ. ಹಾಗೂ ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಉಳಿದ 5.74 ಲಕ್ಷ ರೂ.ಗಳನ್ನು ಭರಿಸಿದೆ ಎಂದು ಕೊಡ್ಗಿ ವಿವರಗಳನ್ನು ನೀಡಿದರು.
‘ರಾಜ್ಯದ ಇನ್ಯಾವುದೇ ಗ್ರಾಪಂ ಇಂಥ ಸಾಧನೆ ಮಾಡಿದೆ ಎಂದು ನಾನು ಭಾವಿಸುವುದಿಲ್ಲ. ಸಂಪೂರ್ಣ ಸೋಲಾರ್ ಗ್ರಾಪಂ ಆಗಿ ಅಮಾಸೆಬೈಲು ದೇಶಕ್ಕೆ ಮಾದರಿಯಾಗಿದೆ.’ ಎಂು ಕೊಡ್ಗಿ ಹೆಮ್ಮೆಯಿಂದ ನುಡಿದರು.
‘ರಾಜ್ಯದ ಇನ್ಯಾವುದೇ ಗ್ರಾಪಂ ಇಂಥ ಸಾನೆಮಾಡಿದೆಎಂದುನಾನುಾವಿಸುವುದಿಲ್ಲ. ಸಂಪೂರ್ಣ ಸೋಲಾರ್ ಗ್ರಾಪಂ ಆಗಿ ಅಮಾಸೆಬೈಲು ದೇಶಕ್ಕೆ ಮಾದರಿಯಾಗಿದೆ.’ ಎಂದು ಕೊಡ್ಗಿ ಹೆಮ್ಮೆಯಿಂದ ನುಡಿದರು. ನಾವು ಸೋಲಾರ್ ದೀಪ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಗ್ರಾಮದ ಸಾಕಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಈಗ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ವಾರದ ಹೆಚ್ಚಿನ ದಿನಗಳಲ್ಲಿ ವಿದ್ಯುತ್ ಇರುವುದಿಲ್ಲ. ಹೀಗಾಗಿ ಇಲ್ಲಿ ಸೌರ ದೀಪಗಳು ನಿತ್ಯ ಅಗತ್ಯತೆಗಳಲ್ಲಿ ಒಂದೆನಿಸಿಕೊಂಡಿದೆ ಎಂದವರು ಹೇಳಿದರು.
‘ಮಳೆಗಾಲದಲ್ಲಂತೂ ನಮಗೆ ವಿದ್ಯುತ್ ಮರೀಚಿಕೆಯಾಗಿತ್ತು. ಕಾಡು ಪ್ರದೇಶವಾಗಿರುವ ಅಮಾಸೆಬೈಲಿನಲ್ಲಿ ಒಂದು ಮರ ಬಿದ್ದರೆ ಹೋದ ವಿದ್ಯುತ್ ಬರಲು ವಾರ ಎರಡು ವಾರ ಬೇಕಾಗುತ್ತದೆ. ಕೆಲವು ಮನೆಗಳಂತೂ ಕಾಡಿನ ಮಧ್ಯದಲ್ಲಿದ್ದು, ಅಲ್ಲಿ ಕರೆಂಟ್ ಇರುವ ದಿನಗಳೇ ವಿರಳ. ಹೀಗಾಗಿ ಸೋಲಾರ್ ಗ್ರಾಮಕ್ಕೆ ಅಗತ್ಯ.’ ಎಂದು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ ವಿವರಿಸಿದರು.
2017ರ ಎ.27ರಂದು ನಡೆದ ಸಮಾರಂಭದಲ್ಲಿ ಅಮಾಸೆಬೈಲು ಗ್ರಾಪಂನ್ನು ಉಡುಪಿ ಜಿಲ್ಲೆಯ ಮೊತ್ತ ಮೊದಲು ಸಂಪೂರ್ಣ ಸೌರ ವಿದ್ಯುತ್ ಹೊಂದಿರುವ ಗ್ರಾಪಂ ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ.ಎಚ್.ಹರೀಶ್ ಹಂದೆ ಘೋಷಿಸಿದ್ದರು.
ಜೂ.9ರಂದು ರವಿವಾರ ಬೆಳಗ್ಗೆ 10:30ಕ್ಕೆ ಎ.ಜಿ.ಕೊಡ್ಗಿ ಅವರ ಅಧ್ಯಕ್ಷತೆ ಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿಇಓ ಮಹಾಬಲೇಶ್ವರ ಭಟ್, ಡಾ.ಹರೀಶ್ ಹಂದೆ, ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮುಂತಾದವರು ಭಾಗವಹಿಸಲಿದ್ದಾರೆ.