×
Ad

​ತಾಂತ್ರಿಕ ಸಮಸ್ಯೆ: ಬಜೆಯಲ್ಲಿ ಪಂಪಿಂಗ್ ಸ್ಥಗಿತ

Update: 2019-06-07 21:13 IST

ಉಡುಪಿ, ಜೂ.7: ತಾಂತ್ರಿಕ ಸಮಸ್ಯೆಯಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ಇಂದು ಪೂರ್ತಿ ದಿನ ಪಂಪಿಂಗ್ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ದುರಸ್ತಿ ಬಳಿಕ ರಾತ್ರಿಯಿಂದ ಪಂಪಿಂಗ್ ಕಾರ್ಯ ನಡೆಸಲಾಗಿದೆ.

ಸದ್ಯ ಸ್ವರ್ಣ ನದಿಯ ಪುತ್ತಿಗೆ ಮಠ ಹಾಗೂ ಅಲ್ಲೇ ಸಮೀಪದಲ್ಲಿರುವ ಆಳ ವಾದ ಗುಂಡಿಯಿಂದ ನೀರನ್ನು ಡ್ರೆಜ್ಜಿಂಗ್ ಮಾಡಿ ಬಜೆಯ ಪಂಪಿಂಗ್ ಸ್ಟೇಶನ್‌ಗೆ ಹಾಯಿಸಲಾಗುತ್ತಿತ್ತು. ಆದರೆ ಡ್ರೆಡ್ಜಿಂಗ್ ಬೋಟಿನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಡ್ರೆಡ್ಜಿಂಗ್ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಇದರಿಂದ ಬಜೆಯಲ್ಲಿ ಪಂಪಿಂಗ್ ಕಾರ್ಯ ಕೂಡ ನಡೆದಿಲ್ಲ. ಆದರೆ ಪಂಪಿಂಗ್ ಮಾಡಿದ ನೀರನ್ನು ಶುದ್ದೀಕರಿಸಿ ಎರಡು ದಿನಗಳಿಗೊಮ್ಮೆ ಸರಬ ರಾಜು ಮಾಡುವುದರಿಂದ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ರಾತ್ರಿಯ ನಂತರ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಪಂಪಿಂಗ್ ಮುಂದುವರೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ಪುತ್ತಿಗೆ ಮಠದ ಬಳಿಯ ಗುಂಡಿಯಲ್ಲಿ ಸಾಕಷ್ಟು ನೀರು ಇರುವುದರಿಂದ ನಾಲ್ಕೈದು ದಿನಗಳ ಕಾಲ ನಗರಕ್ಕೆ ನೀರು ಸರಬರಾಜು ಮಾಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಈಗಲೂ ಪ್ರತಿದಿನ 9-10ಗಂಟೆಗಳ ಕಾಲ ಪಂಪಿಂಗ್ ಮಾಡಲಾಗುತ್ತಿದೆ. ನಗರದಲ್ಲಿ ದೂರು ಬಂದ ಪ್ರದೇಶಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News