×
Ad

56 ಟನ್ ತೂಕದ 23 ಮೀಟರ್ ಉದ್ದದ ಸೇತುವೆಯನ್ನೇ ಕದ್ದ ಗುಜರಿ ಕಳ್ಳರು!

Update: 2019-06-07 21:25 IST

ಮಾಸ್ಕೋ, ಜೂ. 7: ರಶ್ಯದಲ್ಲಿ ಗುಜರಿ ಕಳ್ಳರು ಲೋಹದ ರೈಲು ಸೇತುವೆಯೊಂದನ್ನೇ ಕದ್ದೊಯ್ದ ಘಟನೆಯೊಂದು ವರದಿಯಾಗಿದೆ. ದೇಶದ ದುರ್ಗಮ ಆರ್ಕ್‌ಟಿಕ್ ವಲಯ ಮುರ್ಮನ್‌ಸ್ಕ್‌ನ ಜನರು ಒಂದು ಮುಂಜಾನೆ ಎದ್ದು ನೋಡಿದಾಗ ಸೇತುವೆಯೇ ನಾಪತ್ತೆಯಾಗಿತ್ತು.

ಉಂಬಾ ನದಿಯಲ್ಲಿ ನಿರ್ಮಿಸಲಾಗಿರುವ 23 ಮೀಟರ್ ಉದ್ದದ 56,000 ಕೆಜಿ ತೂಕದ ಲೋಹದ ಸೇತುವೆ ಕಳವಾಗಿರುವ ಬಗ್ಗೆ ಕ್ರಿಮಿನಲ್ ಮೊಕದ್ದಮೆಯೊಂದು ದಾಖಲಾಗಿದೆ.

 ಅರಣ್ಯವೊಂದರ ಸಮೀಪದಲ್ಲಿರುವ ಈ ಸೇತುವೆಯನ್ನು ಈಗ ಬಳಸಲಾಗುತ್ತಿರಲಿಲ್ಲ. 10 ವರ್ಷಗಳ ಹಿಂದೆಯೇ ಅದನ್ನು ಮುಚ್ಚಲಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಜನರು ಈಗ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ಈ ವಿಷಯ ಮೇ ತಿಂಗಳಲ್ಲಿ ಮೊದಲು ಜನರ ಗಮನಕ್ಕೆ ಬಂದಿತ್ತು. ಮೇ 16ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದ ಚಿತ್ರಗಳಲ್ಲಿ ಅವಶೇಷಗಳು ನೀರಿನಲ್ಲಿ ಕಾಣುತ್ತಿದ್ದವು. ಆದರೆ, 10 ದಿನಗಳ ಬಳಿಕ ಆ ಅವಶೇಷಗಳು ನಾಪತ್ತೆಯಾಗಿದ್ದವು. ಅಂದರೆ, ಮೊದಲು ಸೇತುವೆಯನ್ನು ನದಿಗೆ ಬೀಳಿಸಲಾಗಿತ್ತು ಹಾಗೂ ಬಳಿಕ ಅದನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಿಸಲಾಗಿತ್ತು.

ಆದಾಗ್ಯೂ, 56 ಟನ್ ಲೋಹದ ಬೆಲೆ ಕೇವಲ 9,000 ಡಾಲರ್ (ಸುಮಾರು 6.24 ಲಕ್ಷ ರೂಪಾಯಿ) ಎಂಬುದಾಗಿ ಸ್ಥಳೀಯ ಅಧಿಕಾರಿಗಳು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News