ಟ್ರಂಪ್‌ಗಾಗಿ ಆಯೋಜಿಸಿದ ಔತಣಕೂಟಕ್ಕೆ ಬ್ರಿಟಿಶ್ ಗೃಹಕಾರ್ಯದರ್ಶಿ ಸಾಜಿದ್ ಜಾವಿದ್‌ಗೆ ಆಹ್ವಾನವಿಲ್ಲ
ಲಂಡನ್, ಜೂ.7: ಬ್ರಿಟಿಶ್ ರಾಣಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥವಾಗಿ ಆಯೋಜಿಸಿದ್ದ ಭೋಜನಕೂಟಕ್ಕೆ ಬ್ರಿಟಿಶ್ ಗೃಹಕಾರ್ಯದರ್ಶಿ ಸಾಜಿದ್ ಜಾವಿದ್‌ಗೆ ಆಹ್ವಾನ ನೀಡದಿರುವುದು ಬ್ರಿಟನ್ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಾಜಿದ್ ಜಾವಿದ್ ಬ್ರಿಟನ್‌ನ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದು ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬಕ್ಕಿಂಗ್‌ಹ್ಯಾಮ್ ಪ್ಯಾಲೆಸ್‌ನಲ್ಲಿ ನಡೆದ ಸಮಾರಂಭಕ್ಕೆ ಸಾಜಿದ್ ಜಾವಿದ್ ಅವರಿಗೆ ಮಾತ್ರ ಆಹ್ವಾನವಿರಲಿಲ್ಲ. ಸಂಪುಟ ಸದಸ್ಯರ ಪೈಕಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಮತ್ತು ಪರಿಸರ ಕಾರ್ಯದರ್ಶಿ ಮೈಕಲ್ ಗೊವ್ ಅವರು ಈ ಭೋಜನಕೂಟದಲ್ಲಿ ಭಾಗಿಯಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹಂಟ್ ಮತ್ತು ಗೊವ್ ಅವರೂ ಪ್ರಧಾನಿ ರೇಸ್‌ನಲ್ಲಿ ಭಾಗಿಯಾಗಿದ್ದು ಶುಕ್ರವಾರದಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಪ್ರಮುಖ ನಾಯಕನಾಗಿರುವ ಸಾಜಿದ್ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದಾರೆ. 2017ರಲ್ಲಿ ಬ್ರಿಟನ್ ಫಸ್ಟ್ ಎಂಬ ಬಲಪಂಥೀಯ ತೀವ್ರವಾದಿ ಗುಂಪಿನ ಇಸ್ಲಮೊಫೋಬಿಯದ ಟ್ವೀಟ್‌ಗಳನ್ನು ಶೇರ್ ಮಾಡಿದ ಕಾರಣಕ್ಕೆ ಟ್ರಂಪ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಾಜಿದ್ ಜಾವಿದ್ ಮುಸ್ಲಿಂ ಆಗಿರುವ ಕಾರಣ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿಲ್ಲವೇ ಎಂದು ಮುಸ್ಲಿಂ ಕೌನ್ಸಿಲ್ ಆಫ್ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರನ್ನು ಪತ್ರ ಮುಖೇನ ಪ್ರಶ್ನಿಸಿದೆ.