ಅಮೆರಿಕ ವಾಯುಪಡೆಯಲ್ಲಿ ಗಡ್ಡ, ಪೇಟದೊಂದಿಗೆ ಸೇವೆ ಸಲ್ಲಿಸಲು ಸಿಖ್‌ಗೆ ಅವಕಾಶ
ವಾಶಿಂಗ್ಟನ್, ಜೂ. 7: ಸಿಖ್ ಸೈನಿಕರೊಬ್ಬರಿಗೆ ಗಡ್ಡ, ಪೇಟ ಮತ್ತು ಕತ್ತರಿಸದ ಕೂದಲಿನೊಂದಿಗೆ ಸೇವೆ ಸಲ್ಲಿಸಲು ಅಮೆರಿಕದ ವಾಯುಪಡೆಯು ಅವಕಾಶ ನೀಡಿದೆ. ಇದರೊಂದಿಗೆ, ಈ ಧಾರ್ಮಿಕ ರಿಯಾಯಿತಿಗಳನ್ನು ಪಡೆದುಕೊಂಡ ಮೊದಲ ಸಕ್ರಿಯ ವಾಯುಪಡೆ ಸೈನಿಕ ಅವರಾಗಿದ್ದಾರೆ.
2017ರಲ್ಲಿ ಅಮೆರಿಕ ವಾಯುಪಡೆಗೆ ಸೇರ್ಪಡೆಗೊಂಡಿದ್ದ ಏರ್‌ಮನ್ ಹರ್‌ಪ್ರೀತಿಂದರ್ ಸಿಂಗ್ ಬಾಜ್ವಗೆ ಸೇನೆಯ ನಿಯಮಗಳು ಮತ್ತು ವಸ್ತ್ರ ಸಂಹಿತೆಯಿಂದಾಗಿ ತನ್ನ ಸಂಪ್ರದಾಯವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಸಿಖ್ ಅಮೆರಿಕನ್ ಹಿರಿಯರ ಒಕ್ಕೂಟ ಮತ್ತು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಸಂಘಟನೆಗಳು ಬಾಜ್ವ ಪರವಾಗಿ ವಕಾಲತ್ತು ನಡೆಸಿರುವ ಹಿನ್ನೆಲೆಯಲ್ಲಿ, ಅವರಿಗೆ ಈ ವಾಯುಪಡೆ ಈ ರಿಯಾಯಿತಿ ನೀಡಿದೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
‘‘ನನ್ನ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಲು ವಾಯುಪಡೆ ಅವಕಾಶ ನೀಡಿರುವುದರಿಂದ ನನ್ನ ಆನಂದಕ್ಕೆ ಪಾರವೇ ಇಲ್ಲ’’ ಎಂದು ವಾಶಿಂಗ್ಟನ್‌ನ ಮೆಕಾರ್ಡ್ ವಾಯು ಪಡೆ ನೆಲೆಯಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿರುವ ಬಾಜ್ವ ಹೇಳಿದರು.